ಜಿಲ್ಲೆ

ನ.2 ರಂದು ಕೃಷಿವಿಜ್ಞಾನಿ ವಸಂತ್ ಕುಮಾರ್ ಅವರ ಕೃತಿಗಳ ಬಿಡುಗಡೆ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೃಷಿ ವಿಜ್ಞಾನ ವೇದಿಕೆ ವತಿಯಿಂದ ನ.2 ರಂದು ಸಂಜೆ 4ಕ್ಕೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ್ ತಿಮಕಾಪುರ ಅವರ ‘ಕೃಷಿ ಲೋಕದೊಳಗೆ’ ಮತ್ತು ‘ಪ್ಲಾಂಟ್ ಡಾಕ್ಟರ್’ ಕೃತಿಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹೇಳಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ ಸಮಾರಂಭವನ್ನು ಶಾಸಕ ವಾಸು ಉದ್ಘಾಟಿಸಲಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ‘ಕೃಷಿ ಲೋಕದೊಳಗೆ’ ಕೃತಿಯನ್ನು, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಸ್. ರಾಜೇಂದ್ರ ಪ್ರಸಾದ್ ‘ಪ್ಲಾಂಟ್ ಡಾಕ್ಟರ್’ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃತಿ ಕುರಿತು ಹೈದರಬಾದ್‌ನ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಉಪ ಮಹಾನಿರ್ದೇಶಕ ಡಾ.ಸಿ.ಎಲ್. ಲಕ್ಷ್ಮೀಪತಿಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ.ಗುಬ್ಬಿಗೂಡು ರಮೇಶ್ ಮಾತನಾಡಲಿದ್ದಾರೆ. ಅತಿಥಿಗಳಾಗಿ ಗುಲ್ಬರ್ಗ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕೃಷಿ ವಿಜ್ಞಾನಿ ಡಾ.ಟಿ.ಎಂ. ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.