ಬೆಳಗಾವಿ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಸರ್ಕಾರವು ಬಡ್ಡಿ ರಹಿತ ಸಾಲ ಕಲ್ಪಿಸುವುದು, ತ್ವರಿತವಾಗಿ ನ್ಯಾಯಾಲಯದ ಕಲಾಪ ಪ್ರಾರಂಭಿಸುವ ಕುರಿತು ಚರ್ಚಿಸಲು ರಾಜ್ಯದ ಎಲ್ಲ ನ್ಯಾಯವಾದಿ ಸಂಘಗಳ ಸಭೆಯನ್ನು ಜು.17ರಂದು ಕರೆಯಲಾಗಿದೆ ಎಂದು ಬೆಳಗಾವಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ತಿಳಿಸಿದ್ದಾರೆ.
ನಗರದ ನ್ಯಾಯವಾದಿಗಳ ಸಮುದಾಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್ ಪರಿಣಾಮ 4 ತಿಂಗಳಿಂದ ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳ ಕಲಾಪ ಸ್ಥಗಿತ ಗೊಳಿಸಿರುವುದರಿಂದ ವಕೀಲರು ಆರ್ಥಿಕ ತೊಂದರೆಯಲ್ಲಿದ್ದಾರೆ. ಹಾಗಾಗಿ ವಕೀಲರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಮತ್ತೆ ಲಾಕ್‌ಡೌನ್ ಮಾಡುವ ಕುರಿತು ಅಸ್ಪಷ್ಟ ಆಗಿರುವುದರಿಂದ ಕರ್ನಾಟಕದ ಎಲ್ಲ ತಾಲೂಕು, ಜಿಲ್ಲಾ ಹಾಗೂ ಬೆಂಗಳೂರು ಉಚ್ಚ ನ್ಯಾಯಾಲಯ, ಧಾರವಾಡ ಮತ್ತು ಕಲಬುರಗಿ ಉಚ್ಚ ನ್ಯಾಯಲಯ ಪೀಠಗಳ ವಕೀಲರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಬೆಳಗಾವಿ ವಕೀಲರ ಸಂಘದ ಸಮುದಾಯಭವನದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸುಪ್ರಿಂಕೋರ್ಟ್ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಲಾಗುವುದು ಎಂದರು.
ವಕೀಲರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಇಂಡಿಯನ್ ಬಾರ್ ಕೌನ್ಸಿಲ್ ಕಠಿಣ ಸಂದರ್ಭದಲ್ಲಿ ಧ್ವನಿ ಎತ್ತದಿರುವುದು ನೋವಿನ ಸಂಗತಿ. ಆ.15ರೊಳಗಾಗಿ ಎಲ್ಲ ನ್ಯಾಯಾಧೀಶರಿಗೆ ಹಾಗೂ ನ್ಯಾಯವಾದಿಗಳಿಗೆ ಬಡ್ಡಿ ರಹಿತವಾಗಿ ಕನಿಷ್ಠ 5 ಲಕ್ಷ ರೂ.ಸಾಲವನ್ನು ಹತ್ತು ವರ್ಷದ ಕಾಲಾವಧಿಗೆ, ಕಂತಿನಲ್ಲಿ ಮರು ಪಾವತಿ ಮಾಡುವ ಷರತ್ತಿಗೆ ಒಳಪಟ್ಟು ನೀಡುವಂತೆ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಆದೇಶಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದರು. ವಕೀಲರ ಸಂಘದ ಪದಾಧಿಕಾರಿಗಳಾದ ಆರ್.ಸಿ. ಪಾಟೀಲ, ಶಿವಪುತ್ರಪ್ಪ ಪಟಕಲ್ಲ ಇತರರು ಇದ್ದರು.