ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವಭಾವಿಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿದರು. ತಾಪಂ ಇಒ ಲಕ್ಷ್ಮಿದೇವಿ ಯಾದವ್, ನಗರ ಪಿಐ ಅಡಿವೇಶ್ ಎನ್.ಗುದಿಗೊಪ್ಪ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಇತರರಿದ್ದರು. 
ಜಿಲ್ಲೆ

ಆ 15ರಂದು ಅಧಿಕಾರಿಗಳು ಧ್ವಜಾರೋಹಣದಲ್ಲಿ ಭಾಗಿಯಾಗಿ

ಗಂಗಾವತಿ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದಲ್ಲಿ ಅಧಿಕಾರಿಗಳು ಕಡ್ಡಾಯ ಪಾಲ್ಗೊಳ್ಳಬೇಕಿದ್ದು, ಎಲ್ಲ ಕಚೇರಿಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವಂತೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪೂರ್ವಭಾವಿಸಭೆಯಲ್ಲಿ ಮಾತನಾಡಿದರು.

ನಗರದ ಎಲ್ಲ ವೃತ್ತಗಳನ್ನು ವಿದ್ಯುತ್ ದೀಪದಿಂದ ಅಲಂಕರಿಸುವುದು, ಸ್ವಚ್ಛತೆ ಕೈಗೊಳ್ಳಲಾಗುವುದು. ಇಲಾಖೆ, ಗ್ರಾಪಂ ಕಚೇರಿಗಳಲ್ಲಿ ಧ್ವಜಾರೋಹಣ ವೇಳೆ ಸನಿಹದ ಶಾಲಾಮಕ್ಕಳನ್ನು ಆಹ್ವಾನಿಸಬೇಕಿದ್ದು, ಸ್ವಾತಂತ್ರ್ಯೋತ್ಸವದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು.

ತಾಲೂಕು ಮಟ್ಟದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಗವಹಿಸಿ, ಇಲಾಖೆಗೆ ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿ ಯಾವುದೇ ನೆಪ ಹೇಳುವಂತಿಲ್ಲ ಎಂದರು.

ತಾಲೂಕು ಕ್ರೀಡಾಂಗಣಕ್ಕೆ ಮಕ್ಕಳು ತೆರಳಲು ವಾಹನ ವ್ಯವಸ್ಥೆ ಕೈಗೊಳ್ಳಬೇಕಿದ್ದು, ಉಪಹಾರದ ವ್ಯವಸ್ಥೆ ಮಾಡಬೇಕಿದೆ. ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ಜನಜಂಗುಳಿ ನಿಯಂತ್ರಿಸುವಂತೆ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು.

ತಾಪಂ ಇಒ ಲಕ್ಷ್ಮಿದೇವಿ ಯಾದವ್, ನಗರ ಪಿಐ ಅಡಿವೇಶ್ ಎನ್. ಗುದಿಗೊಪ್ಪ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಪರಿಸರ ಇಂಜಿನಿಯರ್ ಚೇತನನಾಯ್ಕ, ಶಿಕ್ಷಣ ಸಂಯೋಜಕ ಎಚ್.ಸಿ.ರಾಘವೇಂದ್ರ ಇತರರಿದ್ದರು.