ಜಿಲ್ಲೆ

14ರಂದು ಅಡೂರು ಮೂಲಸ್ಥಾನ ಕೌಡಿಂಕಾನ ಯಾತ್ರೆ

ಕಾಸರಗೋಡು: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಾಲಯಗಳಲ್ಲಿ ಒಂದಾದ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದ ಪವಿತ್ರ ಮೂಲಸ್ಥಾನ ಕೌಡಿಂಕಾನ ಯಾತ್ರೆ 12 ವರ್ಷಗಳ ನಂತರ ಜ.14ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯ ಸಾರಥ್ಯ ವಹಿಸಲಿರುವ ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರು ಸೀಮೆಯ ಇನ್ನೊಂದು ಪ್ರಮುಖ ದೇವಾಲಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಾಸುದೇವ ತಂತ್ರಿ ಅವರನ್ನು ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮಧೂರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಟಿ.ರಾಜೇಶ್, ಮಧೂರು ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಅಡೂರಿನಿಂದ ತಮ್ಮ ಬಳಗದವರೊಂದಿಗೆ ಆಗಮಿಸಿದ ವಾಸುದೇವ ತಂತ್ರಿ ಅವರಿಗೆ ದೇವರ ಪ್ರಸಾದ ವಿತರಿಸಲಾಯಿತು.

ಅಡೂರು ದೇಗುಲದಿಂದ ಆಗ್ನೇಯ ಭಾಗದ 10 ಕಿ.ಮೀ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಕೌಡಿಂಕಾನ ಮೂಲಸ್ಥಾನವಿದ್ದು, ವಾಸುದೇವ ತಂತ್ರಿ ಯಾತ್ರೆ ನಡೆಸಿ ಮೂಲಮೃತ್ತಿಕೆಯೊಂದಿಗೆ ಆಗಮಿಸಲಿದ್ದಾರೆ. ಈ ಹಿಂದಿನ ಕೌಡಿಂಕಾನ ಯಾತ್ರೆಯನ್ನೂ ವಾಸುದೇವ ತಂತ್ರಿ ಯಶಸ್ವಿಯಾಗಿ ನೆರವೇರಿಸಿದ್ದರು.