ಜಿಲ್ಲೆ

ದೆವ್ವವನ್ನು ದೇವರು ಮಾಡಲು ಬಿಡುವುದಿಲ್ಲ, ಅ.13ಕ್ಕೆ ಚಾಮುಂಡಿ ಬೆಟ್ಟ ಚಲೋಗೆ ಪ್ರತಾಪ್ ಸಿಂಹ ಕರೆ

ಸದೇಶ್ ಕಾರ್ಮಾಡ್

ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸಲು ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅ.13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಾಥಾದಲ್ಲಿ 5 ಸಾವಿರ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಟಿಪ್ಪು, ಹೈದರಾಲಿ ಆಡಳಿತ ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭದಲ್ಲಿ ದಸರಾ ಉತ್ಸವ ನಿರ್ವಿಘ್ನವಾಗಿ ನೆರವೇರಿದೆ. 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದರೆ ಏನು, ನವರಾತ್ರಿ ಅಂದ್ರೆ ಏನು ಎಂಬುದು ಗೊತ್ತಿದೆ. ಆದರೆ, 2015ರಲ್ಲಿ ಮಹಿಷ ದಸರಾವನ್ನು ಹುಟ್ಟುಹಾಕಿದ್ದಾರೆ. ಆ ಸಂದರ್ಭ ಆಡಳಿತ ನಡೆಸುತ್ತಿದ್ದವರು ಉದಾಸೀನ ತೋರಿದ ಪರಿಣಾಮ ಮಹಿಷಾ ದಸರಾ ಮುಂದುವರೆದುಕೊಂಡು ಬಂದಿದೆ ಎಂದು ಬುಧಾವರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಾಮುಂಡಿಬೆಟ್ಟಕ್ಕೆ ಹೋಗಿ ದೆವ್ವವನ್ನು ದೇವರು ಅಂತ, ದೇವರನ್ನು ದೆವ್ವ ಅಂತ ಹೇಳುವ ಕೆಲಸ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಷ ದಸರಾವನ್ನು ತಡೆಯಬೇಕಾಗಿತ್ತು. ಆದರೆ, ಅವರು ತಡೆಯುವ ಮನಸ್ಸು ಮಾಡಲಿಲ್ಲ. ಹಾಗಾಗಿ ಭಕ್ತರ ಭಾವನೆಗೆ ನೋವಾಗುವ ಆಚರಣೆಯನ್ನು ನಿಲ್ಲಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿತು. ಇದೀಗ ಮತ್ತೆ ಮಹಿಷ ದಸರಾ ಆಚರಣೆಗೆ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಾಮುಂಡಿಬೆಟ್ಟದ ಪಾದದಿಂದ ಬೆಟ್ಟಕ್ಕೆ ಮೆರವಣಿಗೆಯಲ್ಲಿ ತೆರಳಾಗುವುದು. ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ ದಿನವಿಡಿ ಕಾರ್ಯಕ್ರಮ ನಡೆಸಲಾಗುವುದು. ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರ ಬಳಿ ತೆರಳಿ ಮಹಿಷ ದಸರಾಗೆ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ. ಇದು ಬಿಜೆಪಿ ಕಾರ್ಯಕ್ರಮವಲ್ಲ, ಹಾಗಾಗಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.