ಜಿಲ್ಲೆ

ನಟನ ರಂಗ ಮಂದಿರದಲ್ಲಿ ಜ.21 ರಂದು ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನ

ಮೈಸೂರು: ರಾಮಕೃಷ್ಣನಗರದ ನಟನ ರಂಗ ಮಂದಿರದಲ್ಲಿ ಜ.21 ರಂದು ಸಂಜೆ 6.30ಕ್ಕೆ ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಇಟಾಲಿಯನ್ ನಾಟಕಕಾರ ದಾರಿಯೋ ಫೋ ಅವರ ‘ದಿ ವರ್ಚುವಸ್ ಬರ್ಗ್‌ಲರ್’ ಕೃತಿ ಆಧಾರಿತ, ಪ್ರಸಿದ್ಧ ನಾಟಕಕಾರ ಕೆ.ವಿ.ಅಕ್ಷರ ಅವರ ಈ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ.

ಈ ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ ನಮಗೆ ಗೋಚರವಾದರೂ ಆಳದಲ್ಲಿ ಇದು ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣದ ಸುಳಿಯನ್ನು ಅನಾವರಣಗೊಳಿಸುತ್ತದೆ. ಹಾಗಾಗಿ, ಇದು ಕುಟುಂಬವೆಂಬ ವ್ಯವಸ್ಥೆಯನ್ನು, ಅದರ ಹಿನ್ನೆಲೆಯಲ್ಲಿ ಅಡಗಿರುವ ನೈತಿಕತೆಯ ನಂಬಿಕೆಗಳನ್ನು ತುಂಬ ಮೊನಚಾದ ವ್ಯಂಗ್ಯದ ಕತ್ತಿಯಿಂದ ಸೀಳಿ, ಅದಕ್ಕೆಲ್ಲ ಮೂಲವಾಗಿರುವ ಮಧ್ಯಮ ವರ್ಗದ ಡಾಂಭಿಕತೆಯನ್ನು ಬಯಲು ಮಾಡುವ ಇರಾದೆಯುಳ್ಳದ್ದು. ಅಂತೆಯೆ, ಜಾಗತೀಕರಣದ ಪ್ರಸ್ತುತ ದಿನಗಳಲ್ಲಿ ಮಧ್ಯಮ, ಮೇಲ್ವರ್ಗದ ಪರಸ್ಪರ ಸಂಬಂಧಗಳ ಸಡಿಲಿಕೆ, ವಿರಸ-ವಿಚ್ಛೇದನ ಸರ್ವೇಸಾಮಾನ್ಯವಾದ ಈ ದಿನಗಳಲ್ಲಿ ಇಂತಹ ನಾಟಕಗಳು ಜನರಿಗೆ ತಾಗಬಲ್ಲ ಗುಣವನ್ನು ಹೊಂದಿವೆ.