ಜಿಲ್ಲೆ

ತೆಂಗಿನ ಮರ ಬಿದ್ದು ಧರೆಗುರುಳಿದ 9 ವಿದ್ಯುತ್ ಕಂಬಗಳು


ವಿಜಯವಾಣಿ ಸುದ್ದಿಜಾಲ ಯಳಂದೂರು
ಪಟ್ಟಣ ಪಂಚಾಯಿತಿ ಕಚೇರಿ ಪಕ್ಕದಲ್ಲಿರುವ ಖಾಸಗಿ ಜಮೀನಿನಲ್ಲಿ ಶನಿವಾರ ಸಂಜೆ ವ್ಯಕ್ತಿಯೊಬ್ಬರು ತಮಗೆ ಸೇರಿದ ತೆಂಗಿನ ಮರ ಕಡಿದ ಪರಿಣಾಮ 9 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಪಟ್ಟಣ ಪಂಚಾಯಿತಿ ಕಚೇರಿ ಪಕ್ಕದಲ್ಲೇ ಇರುವ ಪುಟ್ಟನಂಜಮ್ಮ ಎಂಬುವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಸಂಜೆ ಮರ ಕತ್ತರಿಸುವ ಯಂತ್ರದಲ್ಲಿ ತೆಂಗಿನ ಮರ ಕತ್ತರಿಸಲಾಗುತ್ತಿತ್ತು. ಈ ವೇಳೆ ಮರ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ರಾಷ್ಟ್ರೀಯ ಹೆದ್ದಾರಿ 209 ರ ಬಳಿ ಇದ್ದ ಪ್ರೈಮರಿ ಹಾಗೂ ಸೆಕೆಂಡರಿ ವಿದ್ಯುತ್ ಕಂಬಗಳು ತರೆಗೆಲೆಗಳಂತೆ ಮದ್ಯಕ್ಕೆ ಮುರಿದು ಬಿದ್ದವು. ಒಟ್ಟು 9 ವಿದ್ಯುತ್ ಕಂಬಗಳ ಸಹಿತ ವಿದ್ಯುತ್ ಪರಿವರ್ತಕವೂ ಧರೆಗುರುಳಿತು. ಈ ಸಂದರ್ಭದಲ್ಲಿ ವಿದ್ಯುತ್ ಇದ್ದರೂ ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ಭಾರಿ ಅವಘಡ ತಪ್ಪಿದೆ.
ಘಟನೆ ಸಂಬಂಧ ತೆಂಗಿನ ಮರ ಕತ್ತರಿಸುತ್ತಿದ್ದ ವ್ಯಕ್ತಿ ಹಾಗೂ ಜಮೀನಿನ ಮಾಲೀಕರ ವಿರುದ್ಧ ಸೆಸ್ಕ್ ಹಾಗೂ ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದೆ.