ಜಿಲ್ಲೆ

31ಕ್ಕೆ ನಂದಿ ಬೆಟ್ಟ ಪ್ರವೇಶ ನಿರ್ಬಂಧ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಿಕ್ಕಬಳ್ಳಾಪುರ: ಪ್ರತಿ ವರ್ಷದಂತೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಮಧ್ಯರಾತ್ರಿ ಹೊಸ ವರ್ಷ ಸಂಭ್ರಮಾಚರಣೆ ನಿಷೇಧಿಸಿರುವ ಜಿಲ್ಲಾಡಳಿತ, ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 6ರವರೆಗೆ ಗಿರಿಧಾಮವನ್ನು ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಕರ್ನಾಟಕದ ಊಟಿ ಎಂತಲೇ ಕರೆಸಿಕೊಂಡಿರುವ ನಂದಿ ಗಿರಿಧಾಮವು ಹಸಿರುಮಯ ವಾತಾವರಣ, ಮಂಜಿನ ಸಿಂಚನ, ಪುರಾತನ ಆಲಯ, ಟಿಪ್ಪು ಡ್ರಾಪ್ ಮತ್ತು ಬೆಟ್ಟಗುಡ್ಡಗಳ ವಿಹಂಗಮ ನೋಟ ಸೇರಿ ಆಕರ್ಷಕ ಪ್ರಾಕೃತಿಕ ಸೊಬಗಿನಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಇಂತಹ ಸ್ಥಳದಲ್ಲಿ ಹೊಸ ವರ್ಷದ ಮೊದಲ ಕ್ಷಣದ ಸಂಭ್ರಮಾಚರಣೆಯ ಥ್ರಿಲ್ ಅನುಭವಿಸಬೇಕೆನ್ನುವುದು ಬಹುತೇಕರ ಬಯಕೆ.

ಆದರೆ, ಪಾರ್ಟಿ ಹೆಸರಿನಲ್ಲಿ ಮದ್ಯಸೇವನೆ, ಅನೈತಿಕ ಚಟುವಟಿಕೆ, ಗಲಾಟೆ ಮತ್ತು ಹಲ್ಲೆ ಸೇರಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಹೊಸ ವರ್ಷಾಚರಣೆಗೆ ಅನುಮತಿ ನಿರಾಕರಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿತ್ಯ ಆಗಮಿಸುವ ಪ್ರವಾಸಿಗರಿಂದ ತುಂಬಿ ತುಳುಕಾಡುವ ಜಿಲ್ಲೆಯ ನಂದಿ ಗಿರಿಧಾಮ, ಸ್ಕಂದಗಿರಿ, ಆವಲಬೆಟ್ಟಕ್ಕೆ ನಿಗದಿತ ನಿಷೇಧಿತ ಅವಧಿಯಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಾರಿಗೊಳಿಸಿರುವ ನಿಯಮವನ್ನು ಉಲ್ಲಂಘಿಸದಿರಲು ಜಿಲ್ಲಾಡಳಿತ ಸೂಚಿಸಿದೆ. ಈಗಾಗಲೆ ನಂದಿ ಗಿರಿಧಾಮದಲ್ಲಿ ಚೆಕ್​ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಹೊಸ ವರ್ಷದ ದಿನದಂದು ಮತ್ತಷ್ಟು ಬಿಗಿ ಬಂದೋಬಸ್ತ್ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಮುಂದಾಗಿದೆ.

ಹೊಸ ವರ್ಷಾಚರಣೆಗಿಲ್ಲ ಅವಕಾಶ: 

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜತೆಗೆ ಪ್ರವಾಸಿಗರಿಗೆ ಅತಿಥಿ ಗೃಹಗಳಲ್ಲಿ ಕೊಠಡಿಗಳ ಕಾಯ್ದಿರಿಸುವುದನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು.

| ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ.