ಸಾಗರ: ಪ್ರಾಂತ್ಯ ಆರ್ಯ ಈಡಿಗರ ಸಂಘದಿಂದ ಆ.27ರಂದು ಬೆಳಗ್ಗೆ 11ಕ್ಕೆ ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ಸಮಾಜದ ನೂತನ ಶಾಸಕರು ಮತ್ತು ಸಚಿವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ಟಿ.ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೂ ಆದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಹಿಸಲಿದ್ದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಂತ್ಯ ಈಡಿಗರ ಸಂಘವು 700ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು 5 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಸಮುದಾಯ ಭವನ ಪಕ್ಕದಲ್ಲಿಯೇ, ವಿದ್ಯಾರ್ಥಿನಿಲಯ ಸ್ಥಾಪಿಸಲಾಗಿದೆ. ಐವತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನೂ ಎರಡು ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದೆ. ಹೆಚ್ಚಿನ ಅನುದಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜದ ಶಾಸಕರಿಗೆ ಈ ವೇಳೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಪರಮೇಶ್ವರಪ್ಪ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿಯನ್ನು ಸರ್ಕಾರ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಕೂಡ ವಿಶೇಷವಾಗಿ ಬರುವ ದಿನದಲ್ಲಿ ಆಯೋಜಿಸಲಾಗುತ್ತದೆ ಎಂದರು. ಪ್ರಮುಖರಾದ ಮರಸ ಮಂಜಪ್ಪ, ಕಲಸೆ ಚಂದ್ರಪ್ಪ, ಎಂ.ಸಿ.ಪರಶುರಾಮಪ್ಪ, ಶಿವಪ್ಪ ಕಲಸೆ ಇದ್ದರು.