ಬಾಗಲಕೋಟೆ : ರೋಟರಿ ಕ್ಲಬ್ ಬಾಗಲಕೋಟೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.23 ರಂದು ಸಂಜೆ 6ಕ್ಕೆ ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ನೂತನ ಅಧ್ಯಕ್ಷ ಸಂತೋಷ ನಾವಲಗಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷರಾಗಿ ತಾವು, ಕಾರ್ಯದರ್ಶಿಯಾಗಿ ರಮೇಶ ಅಂಗಡಿ ಹಾಗೂ ಖಜಾಂಚಿಯಾಗಿ ಮಹಾದೇವ ದಂದರಗಿ ನೇಮಕವಾಗಿದ್ದು, ಮೂವರು ಅಂದು ಅಧಿಕಾರ ವಹಿಸಲಿದ್ದಾರೆ ಎಂದರು.
ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಅನುಸ್ಥಾಪನಾ ಅಧಿಕಾರಿ ಅರುಣ ಭಂಡಾರಿ, ಅತಿಥಿಗಳಾಗಿ ಆರ್.ಪಿ. ನ್ಯಾಮಗೌಡ, ಡಾ. ಗಿರೀಶ ಮಸುರಕರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಮ್ಮ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಜನರ ಆರೋಗ್ಯ ತಪಾಸಣಾ ಶಿಬಿರ, ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ವಿವಿಧೆಡೆ ಯೋಗಾ ಶಿಬಿರಗಳ ಆಯೋಜನೆ, ರಸ್ತೆ ಸುರಕ್ಷತಾ ಅರಿವು, ಪ್ರತಿ ತಿಂಗಳು ರಕ್ತದಾನ ಶಿಬಿರ, ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕ್ಲಬ್‌ನ ನೂತನ ಕಾರ್ಯದರ್ಶಿ ರಮೇಶ ಅಂಗಡಿ, ಖಜಾಂಚಿ ಎಂ.ಎಸ್. ದಂದರಗಿ, ನಿಕಟ ಪೂರ್ವ ಅಧ್ಯಕ್ಷ ಸೋಮು ಪರಾಂಡೆ, ಡಾ. ಗಿರೀಶ ಮಸೂರಕರ್ ಸೇರಿದಂತೆ ಇದ್ದರು.