ಜಿಲ್ಲೆ

23ಕ್ಕೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಸ್ಪರ್ಧೆಗೆ ಹಲವರ ಉತ್ಸುಕತೆ ಮತ ಚಲಾವಣೆ ಸಾಧ್ಯತೆ ಕ್ಷೀಣ

ದೊಡ್ಡಬಳ್ಳಾಪುರ: ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ಸೆ.23ರಂದು ನಡೆಸಲು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಅಧಿಸೂಚನೆ ಹೊರಡಿಸಿದ್ದಾರೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾತಿ ನಿಗದಿಯಾಗಿದೆ. ಇದರನ್ವಯ ಸೆ.23 ರಂದು ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಯಲಿದೆ.
ಸೆ.23ರಂದು ಬೆಳಗ್ಗೆ 9 ರಿಂದ 11ರವರೆಗೆ ನಾಮಪತ್ರ ಸಲ್ಲಿಕೆ, ಚುನಾವಣೆ ಸಭೆ ಮಧ್ಯಾಹ್ನ 1ಕ್ಕೆ ಆರಂಭವಾಗಲಿದೆ. 1.15 ರಿಂದ 1.30ರವರೆಗೆ ನಾಮಪತ್ರ ಪರಿಶೀಲನೆ, 1.30 ರಿಂದ 2 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಹಾಗೂ ಚುನಾವಣೆ ಅಗತ್ಯವೆನಿಸಿದಲ್ಲಿ 2 ಗಂಟೆಯಿಂದ ಆರಂಭವಾಗಲಿದೆ.


31 ಜನ ಸದಸ್ಯರನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9, ಜೆಡಿಎಸ್ 7 ಹಾಗೂ ಪಕ್ಷೇತರ ಸದಸ್ಯರು 3 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿತ್ತು. ಬಿಜೆಪಿ ಸದಸ್ಯೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರು ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗೆ ನಿಗದಿಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಸದಸ್ಯೆ ಫರ್ಹಾನಾತಾಜ್ ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಅಭ್ಯರ್ಥಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಗೆ ಮೀಸಲು ನಿಗದಿಯಾಗಿರುವುದರಿಂದ ಸಹಜವಾಗಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲ ವರ್ಗದ ಮಹಿಳೆಯರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಬಹಳಷ್ಟು ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ.


ಜೆಡಿಎಸ್‌ನಿಂದ ಪ್ರಭಾ ನಾಗರಾಜ, ಬಿಜೆಪಿಯಿಂದ ಬಿ.ನಾಗರತ್ನಮ್ಮ ಕೃಷ್ಣಮೂರ್ತಿ, ಎಸ್.ವತ್ಸಲಾ, ಸುಮಿತ್ರಮ್ಮ ಆನಂದ್, ಹಂಸಪ್ರಿಯ ದೇವರಾಜ್, ರೂಪಿಣಿ ಮಂಜುನಾಥ್, ಕಾಂಗ್ರೆಸ್‌ನ ನಾಗವೇಣಿ ಶ್ರೀನಿವಾಸ್, ರಜನಿ ಎಂ.ಸುಬ್ರಮಣಿ, ಹಾಗೂ ಈಗಾಗಲೇ ಅಧ್ಯಕ್ಷರಾಗಿದ್ದ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರು ಮತ್ತೊಮ್ಮೆ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್, ವಡ್ಡರಹಳ್ಳಿ ರವಿಕುಮಾರ್, ಟಿ.ಎನ್.ಪ್ರಭುದೇವ್, ಡಿ.ಎಂ.ಆನಂದ್ ಹೆಸರು ಕೇಳಿ ಬರುತ್ತಿವೆ. ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆ ಆಗಿರುವುದರಿಂದ ಮತ್ತೆ ಚುನಾವಣೆ ನಡೆಯುವ ಹಾಗೂ ಮತ ಚಲಾಯಿಸುವ ಸಂದರ್ಭವು ಬಹುತೇಕ ಬರಲಾರದು. ಈ ಕಾರಣದಿಂದ ವಿಪ್ ಜಾರಿ ಸಂಬಂಧ ಸದಸ್ಯರು ಆತಂಕ ಹೊಂದಿಲ್ಲ.