ಬೆಳಗಾವಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಿತೋ ಅಧ್ಯಕ್ಷ ಮುಕೇಶ ಪೋರವಾಲ ಮಾತನಾಡಿದರು. ಹರ್ಷವರ್ಧನ ಇಂಚಲ, ವಿಕ್ರಮ ಜೈನ, ಶ್ರೀಕಾಂತ ವಿರಗಿ, ನಿತಿನ್ ಪೋರವಾಲ, ಕುಂತಿನಾಥ ಕಲಮನಿ ಇದ್ದರು. 
ಜಿಲ್ಲೆ

15ರಂದು ಬೃಹತ್ ರಕ್ತದಾನ ಶಿಬಿರ

ಶಂಕರ ಗೆಜ್ಜಿ

ಬೆಳಗಾವಿ: ಜೈನ್ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್ (ಜಿತೋ) ಬೆಳಗಾವಿ ವಿಭಾಗದ ಡ್ರಗ್ ಕಂಟ್ರೋಲ್ ಡಿಪಾರ್ಟ್‌ಮೆಂಟ್ ಸಹಯೋಗದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.15 ರಂದು ಬೆಳಗಾವಿ ಹಿಂದವಾಡಿಯ ಮಹಾವೀರ ಭವನದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಅಧ್ಯಕ್ಷ ಮುಖೇಶ ಪೋರವಾಲ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳಿಂದ ಜಿತೋ ಸಂಸ್ಥೆ ರಕ್ತದಾನ ಶಿಬಿರ ಆಯೋಜಿಸುತ್ತ ಬಂದಿದ್ದು, ಎಲ್ಲ ಶಿಬಿರಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ವಿವಿಧ ಸಂಸ್ಥೆಗಳು, ಸಾಮಾಜಿಕ ಸೇವಾ ಸಂಸ್ಥೆಗಳು, ಉದ್ದಿಮೆ ಸಂಸ್ಥೆಗಳು ಸೇರಿ ಇನ್ನಿತರ ಸಂಸ್ಥೆಗಳ ಜತೆ ಮತ್ತು ಅವರ ಸಹಯೋಗದಲ್ಲಿ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಕೆಎಲ್‌ಇ ಬ್ಲಡ್ ಬ್ಯಾಂಕ್, ಬಿಮ್ಸ್ ಬ್ಲಡ್ ಬ್ಯಾಂಕ್, ಮಹಾವೀರ ಬ್ಲಡ್ ಬ್ಯಾಂಕ್, ಬೆಳಗಾವಿ ಬ್ಲಡ್ ಬ್ಯಾಂಕ್ ಭಾಗವಹಿಸಲಿದ್ದು, ಈ ಸಂಸ್ಥೆಗಳು ರಕ್ತ ಸಂಗ್ರಹಿಸಲಿವೆ ಎಂದರು.
ಜಿತೋ ಆರೋಗ್ಯ ರಕ್ಷಣೆ ವಿಭಾಗದ ಸಂಯೋಜಕ ಹರ್ಷವರ್ಧನ ಇಂಚಲ ಮಾತನಾಡಿ, ರಕ್ತದಾನ ಮಾಡುವ ದಾನಿಗಳಿಗೆ ಕೃತಜ್ಞತೆ ರೂಪದಲ್ಲಿ ಅವರಿಗೆ 1 ಲಕ್ಷ ರೂ.ವರೆಗೆ 1 ವರ್ಷದ ಅವಧಿಗಾಗಿ ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂ. ಲಿಮಿಟೆಡ್ ಜನತಾ ಪರ್ಸನಲ್ ಆ್ಯಕ್ಸಿಡೆಂಟ್ (ಅಪಘಾತ ವಿಮೆ ) ಪಾಲಿಸಿ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿತೋ ಅಪೆಕ್ಸ್ ಸಂಯೋಜಕ ವಿಕ್ರಮ ಜೈನ, ಕೆಎಲ್‌ಇ ಬ್ಲಡ್ ಬ್ಯಾಂಕ್ ಅಧಿಕಾರಿ ಶ್ರೀಕಾಂತ ವಿರಗಿ, ಮುಖ್ಯ ಕಾರ್ಯದರ್ಶಿ ನಿತಿನ್ ಪೋರವಾಲ, ಕುಂತಿನಾಥ ಕಲಮನಿ, ಅಭಯ ಹಾದಿಮನಿ ಇದ್ದರು.