ಚನ್ನರಾಯಪಟ್ಟಣ: ಪಟ್ಟಣದ ಗ್ರಾಮ ದೇವತೆ ವಳಗೇರಮ್ಮ ದೇವಿಗೆ ದೇವಸ್ಥಾನ ಸಮಿತಿಯಿಂದ ನೂತನ ರಥ ನಿರ್ಮಾಣ ಮಾಡಿದ್ದು ಜು.14ರಂದು ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಗ್ರಾಮ ದೇವತೆಗೆ ಪ್ರತಿ ನರಕ ಚತುದರ್ಶಿಯಂದು ರಥೋತ್ಸವ ನಡೆಯುತ್ತದೆ. ಈವರೆಗೂ ದೇವಿಗೆ ರಥವಿರಲಿಲ್ಲ. ಕೋಟೆ ಚನ್ನಕೇಶವ ದೇವಸ್ಥಾನದಲ್ಲಿ ದೇವಿಯನ್ನಿಟ್ಟು ರಥ ಎಳೆಯಲಾಗುತಿತ್ತು. 2006ರಿಂದಲೂ ರಥ ನಿರ್ಮಾಣ ಮಾಡುವ ಸಂಕಲ್ಪ ಮಾಡಿದರೂ ಕೈಗೂಡಿರಲಿಲ್ಲ. ಇದೀಗ ಸಮಿತಿ ರಚಿಸಿ 16 ಲಕ್ಷ ರೂ. ವೆಚ್ಚದಲ್ಲಿ ಸುಂದರವಾಗಿ ರಥ ನಿರ್ಮಿಸಲಾಗಿದೆ ಎಂದು ವಳಗೇರಮ್ಮನ ದೇವಸ್ಥಾನದ ರಥ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಸುಬ್ಬಣ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಟ್ಟಣದಲ್ಲಿ ರಥ ಸಂಚರಿಸುವ ಮಾರ್ಗಕ್ಕೆ ಅನುಗುಣವಾಗಿ 17ಅಡಿ ಎತ್ತರಕ್ಕಷ್ಟೆ ರಥ ನಿರ್ಮಾಣ ಸೀಮಿತಗೊಳಿಸಲಾಗಿದೆ. ಬಾಗೆ, ಗೊಬ್ಬಳಿ, ತೇಗ, ಹೊನ್ನೆ, ಬೇವಿನ ಮರವನ್ನು ಬಳಕೆ ಮಾಡಲಾಗಿದೆ. ಹಳೇ ರಥದ ರೀತಿ ವಿನ್ಯಾಸಗೊಳಿಸಲಾಗಿದೆ. ತಿ.ನರಸೀಪುರದ ವ್ಯಾಸರಾಯನಪುರದ ಶಿಲ್ಪಿ ಸ್ವಾಮಿ ಆಚಾರ್ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ರಥ ನಿರ್ಮಾಣಕ್ಕಾಗಿ ರಾಜ್ಯದ 160ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ದೇವಿಯ ಭಕ್ತರಿಂದ ದೇಣಿಗೆ ಪಡೆದು ರಥ ನಿರ್ಮಿಸಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಹಣ ಸಂಗ್ರಹವಾಗಿದೆ. ರಥದ ಮನೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ನಿರ್ಮಿಸಿದ್ದಾರೆ ಎಂದರು.
ರಥ ಉದ್ಘಾಟನೆ ಅಂಗವಾಗಿ ಅಂದು ಬೆಳಗ್ಗೆ 6 ಗಂಟೆಗೆ ಪುಣ್ಯಾಹ, ನಾಂದಿ ಪೂಜೆ, ಕಳಸ ಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯಂಜಯ ಹೋಮ, ವಾಸ್ತು ಪೂಜೆ ನಡೆಯಲಿದೆ. 8 ಗಂಟೆಗೆ ದೇವಿಗೆ ಪಂಚಾಮೃತ ಅಭಿಷೇಕ, ಭಜನೆ ನಡೆಯಲಿದೆ. ನವಚಂಡಿಕಾ ಹೋಮ ಬಳಿಕ ಪೂರ್ಣಾಹುತಿ ತರುವಾಯ ನೂತನ ರಥ ಸಮರ್ಪಣೆ ಮತ್ತು ದೇವಾಲಯದ ಸುತ್ತ ದಿವ್ಯ ರಥೋತ್ಸವ ನಡೆಯಲಿದೆ. 4 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.
ಸಮಿತಿ ಅಧ್ಯಕ್ಷ ಸಿ.ಆರ್.ನಂಜುಂಡಸ್ವಾಮಿ, ಕಾರ್ಯದರ್ಶಿ ಸಿ.ಎನ್.ಸೀತಾರಾಂ, ನಿರ್ದೇಶಕರಾದ ಮಂಜು ಹೆಬ್ಬಾರ್, ರಘು ಶಾಮಿಯಾನ, ಧೀರಜ್, ಬಾಬು, ಉಮೇಶ್, ಮಹೇಶ್, ಬಾಬು, ಶೇಖರ್ ಹೆಬ್ಬಾರ್ ಇದ್ದರು.