ಜಿಲ್ಲೆ

13ರಂದು ಲೋಕ ಅದಾಲತ್ ಹಲವು ಸಮಸ್ಯೆಗಳು ಇತ್ಯರ್ಥ

ಎಂ.ರವಿ

ಪಾಂಡವಪುರ: ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಜು.13 ರಂದು ಲೋಕ ಆದಾಲತ್ ಆಯೋಜಿಸಿದ್ದು, ಸಾರ್ವಜನಿಕರು, ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಹಿರಿಯ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.

ಲೋಕ ಆದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ಸಂಬಂಧಪಟ್ಟ ತಾಲೂಕು ಕಾನೂನು ಸೇವಾ ಸಮಿತಿ ಮುಂದೆ ಖುದ್ದು ಹಾಜರಾಗಿ ಮಾಹಿತಿ ಪಡೆದುಕೊಂಡು ನ್ಯಾಯಾಲಯದಲ್ಲಿ ಬಾಕಿ ಇರುವ ಕೇಸುಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಜತೆಗೆ ತಾಲೂಕು ಕಾನೂನು ಸೇವಾ ಸಮಿತಿಗೆ ಆನ್‌ಲೈನ್, ವಿಡಿಯೊ ಕಾನ್ಫೆರೆನ್ಸ್, ಇ-ಮೇಲ್, ವಾಟ್ಸ್‌ಆ್ಯಪ್, ಎಲೆಕ್ಟ್ರಾನಿಕ್ ಮೋಡ್ ಇತ್ಯಾದಿಗಳ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಐದು ಕೋರ್ಟ್‌ನಲ್ಲಿ ಲೋಕ ಆದಾಲತ್‌ಗೆ ಸಂಬಂಧಿಸಿದಂತೆ ಪೂರ್ವಬಾವಿ ಬೈಠಕ್ ಪೀಠಗಳು ನಡೆಯುತ್ತವೆ. ನೀರಿನ ಬಿಲ್ ಪಾವತಿ, ಪ್ರತಿದಿನ ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ ಹಾಗೂ ಬ್ಯಾಂಕ್ ಸಾಲ ವಸೂಲಾತಿ, ಬಾಕಿ ಉಳಿದಿರುವ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮಾಡುವ ವಿಶೇಷ ಪೀಠ ನಡೆಯುತ್ತಿದೆ. ಆದಾಲತ್‌ನಲ್ಲಿ ಎಂವಿಸಿಯ 200 ಪ್ರಕರಣಗಳು, ಎಂಎಂಆರ್‌ಡಿ 30, ಎಲ್‌ಐಸಿಯ 17, ವಿಭಾಗದ ದಾವೆ ಪ್ರಕರಣಗಳು 400, 200 ಸಿವಿಲ್ ಪ್ರಕರಣಗಳು, 50 ನಿರ್ದಿಷ್ಟ ಪರಿಹಾರದ ದಾವೆ, ಕ್ರಿಮಿನಲ್ ಪ್ರಕರಣಗಳು 300 ಹಾಗೂ ಸಣ್ಣಪುಟ್ಟ ವ್ಯಾಜ್ಯ 300 ಮತ್ತು ಎನ್‌ಐಟಿ ಆ್ಯಕ್ಟ್ ಪ್ರಕರಣಗಳು ಸೇರಿದಂತೆ 1,497 ಪ್ರಕರಣಗಳನ್ನು ಜು.13 ರಂದು ನಡೆಯುವ ಆದಾಲತ್‌ನಲ್ಲಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಬಿ.ಪಾರ್ವತಮ್ಮ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸಲು ನೀಡಲಾಗುತ್ತಿರುವ ಶೇ.5ರ ರಿಯಾಯಿತಿಯನ್ನು ಜು.13ರ ತನಕ ವಿಸ್ತರಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕೆ.ಎನ್.ನಾಗರಾಜು ನ್ಯಾಯಾಲಯದ ಸಿಬ್ಬಂದಿ ಮನುಕುಮಾರ್, ಮಂಚಯ್ಯ ಇದ್ದರು.