ರಾಮದುರ್ಗ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ರಾಜೇಶ ಬೀಳಗಿ, ಮಲ್ಲಣ್ಣ ಯಾದವಾಡ ಇತರರಿದ್ದರು. 
ಜಿಲ್ಲೆ

12ರಂದು ಜಗದೀಶ ಶೆಟ್ಟರ್ ಅಭಿನಂದನಾ ಸಮಾರಂಭ

ರಾಮದುರ್ಗ: ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಅಭಿನಂಧನಾ ಸಮಾರಂಭವನ್ನು ಜು.12 ರಂದು ಸಂಜೆ 4 ಗಂಟೆಗೆ ಪಟ್ಟಣದ ಸಮೀಪದ ತುರನೂರ ಶ್ರೀ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 1.80 ಲಕ್ಷ ಮತಗಳ ಅಂತರದಿಂದ ಶೆಟ್ಟರ್ ಅವರನ್ನು ಆಯ್ಕೆ ಮಾಡಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಮತದಾರರು ಶ್ರಮಿಸಿದ್ದಾರೆ. ಸಂಸದರಿಗೆ ಹಾಗೂ ಮತದಾರರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ರಾಜ್ಯ ಹಾಗೂ ವಿವಿಧ ದೇಶಗಳಲ್ಲಿ ಅಂಗ ಸಂಸ್ಥೆಗಳನ್ನು ತೆರೆಯಲು ಶ್ರಮಿಸಿದ ಡಾ.ಪ್ರಭಾಕರ ಕೋರೆ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಅವರನ್ನು ಸತ್ಕರಿಸಲಾಗುವುದು. ತಾಲೂಕಿನ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ರಾಮದುರ್ಗ ಪಟ್ಟಣದಲ್ಲಿ ಬೀದಿ ದೀಪಗಳೇ ಇಲ್ಲದಂತಾಗಿದೆ. ಜನರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ. ಶಾಸಕರು ಸ್ಥಳೀಯವಾಗಿ ಲಭ್ಯವಿದ್ದು, ಜನರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಉಪಾಧ್ಯಕ್ಷ ಮಾರುತಿ ಕೊಪ್ಪದ, ಬಿಜೆಪಿ ತಾಲೂಕು ಕಾರ್ಯದರ್ಶಿ ಉಮೇಶ ಹಕಾಟಿ ಇತರರಿದ್ದರು.