ತೇರದಾಳ: ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನ ನ.11ರಂದು ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಸ್ಥಳೀಯ ಗುಮ್ಮಟ ಗಲ್ಲಿಯ ಭಕ್ತಾದಿಗಳು ಬಸವ ಪುರಾಣ ನಡೆದಾಗ ಅ.21ರಂದು ಒಂದು ದಿನ ಎಲ್ಲರಿಗೂ ಹೋಳಿಗೆ-ತುಪ್ಪ ಊಟದ ವ್ಯವಸ್ಥೆ ಮಾಡುವುದಲ್ಲದೆ, ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ 2,01,100 ರೂ. ಸಂಗ್ರಹಿಸಿ ನಮಗೆ ಕೊಟ್ಟಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಿಂಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮವು ಅ.14ರ ಅಲ್ಲಮಪ್ರಭು ಪ್ರಭುಜ್ಯೋತಿಯ ಆಗಮನದೊಂದಿಗೆ ಪ್ರಾರಂಭಗೊಳ್ಳುವುದು. ಇದೇ ವರ್ಷ ಹಚ್ಚಿದ ಕಬ್ಬಿನ ಬೆಳೆ ತೆಗೆದು ಕಾರ್ಯಕ್ರಮ ಮಾಡಲು ಜಮೀನುಗಳನ್ನು ಖಾಲಿ ಮಾಡಿಕೊಡುತ್ತಿರುವ ಭಕ್ತಾದಿಗಳು, ವಚನೋತ್ಸವದ ಮೆರವಣಿಗೆಗೆ ಆನೆ-ಅಂಬಾರಿ ವ್ಯವಸ್ಥೆ ಮಾಡುವವರು, ನ. 9,10,11ರಂದು ದೇವಸ್ಥಾನಕ್ಕೆ ಪುಷ್ಪಾಲಂಕಾರ ಮಾಡಲು ಒಪ್ಪಿಕೊಂಡಿರುವ ಭಕ್ತರ ಭಕ್ತಿಗೆ ನಾವು ಅಭಿನಂದಿಸಲೇಬೇಕು ಎಂದರು.
ಮಲ್ಲಪ್ಪಣ್ಣ ಜಮಖಂಡಿ, ಯಮನಪ್ಪ ಮುಕುಂದ, ಜಗದೀಶ ಮುಕುಂದ, ಶ್ರೀಶೈಲ ಸಸಾಲಟ್ಟಿ ಮತ್ತಿತರರು ಸಂಗ್ರಹಿಸಿದ ಹಣವನ್ನು ಕಮಿಟಿಗೆ ನೀಡಿದರು. ಚಿಮ್ಮಡದ ಪ್ರಭು ಶ್ರೀಗಳು, ಸ್ಥಳೀಯ ಹಿರೇಮಠದ ಗಂಗಾಧರ ದೇವರು ಆಶೀರ್ವಚನ ನೀಡಿದರು.
ಬಸವರಾಜ ಬಾಳಿಕಾಯಿ, ಅಜಿತ ದೇಸಾಯಿ, ಬಸವರಾಜ ನಿರ್ವಾಣಿ, ಶಂಕರ ಕುಂಬಾರ, ಅರ್ಜುನ ಖ್ಯಾತಗೊಂಡ, ಭುಜಬಲಿ ಕೆಂಗಾಲಿ, ಪ್ರಸನ್ನಕುಮಾರ ದೇಸಾಯಿ, ನಾಗಪ್ಪ ಸನದಿ, ಅರ್ಚಕ ಪರಯ್ಯ ಮೇಲಿನಮನಿ, ನಿಂಗಪ್ಪ ಮಾಲಗಾಂವಿ ಇತರರಿದ್ದರು.
ರೊಟ್ಟಿ ಸಿದ್ಧತೆ: ಅ.14 ರಿಂದ ನ.11ರ ವರೆಗೆ ನಡೆಯುವ ದೇವಸ್ಥಾನ ಲೋಕಾರ್ಪಣೆ ವೇಳೆ ಲಕ್ಷಾಂತರ ಭಕ್ತರಿಗೆ ಪ್ರಸಾದ ಸೇವೆ ನಡೆಯುವ ಹಿನ್ನೆಲೆಯಲ್ಲಿ ಕಲ್ಲಟ್ಟಿ ಗಲ್ಲಿಯ 50ಕ್ಕೂ ಅಧಿಕ ಮಹಿಳೆಯರು 25 ಸಾವಿರದಷ್ಟು ರೊಟ್ಟಿ ಮಾಡುವ ಸಿದ್ಧತೆಯಲ್ಲಿ ಅಣಿಯಾಗಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರೂ ವಿವಿಧ ಆಹಾರ ಪದಾರ್ಥ ತರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ.