ಕಾರ್ಕಳ: ಆಮ್ನಿ ಕಾರು ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ನಿಟ್ಟೆ ಗ್ರಾಮದ ದೂಪದಕಟ್ಟೆ ಜಂಕ್ಷನ್‌ನಲ್ಲಿ ನಡೆದಿದೆ.
ಮಂಗಳೂರಿನ ಮೋಹನ್(52) ಎಂಬುವರು ಆಮ್ನಿ ಕಾರಿನಲ್ಲಿ ಪಡುಬಿದ್ರಿ ಕಡೆಯಿಂದ ಮಾಳ ಕಡೆಗೆ ಸಾಗುತ್ತಿರುವ ವೇಳೆಗೆ ದೂಪದಕಟ್ಟೆ ಜಂಕ್ಷನ್ ಬಳಿ ಆಟೋರಿಕ್ಷಾ ಚಾಲಕ ಹುಸೇನ್ ನೌಶದ್ ಎಂಬುವರು ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಕಡೆಗೆ ಅತಿವೇಗದಿಂದ ರಾಂಗ್ ಸೈಡ್‌ನಲ್ಲಿ ಚಲಾಯಿಸಿಕೊಂಡು ಬಂದು ಆಮ್ನಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳೂ ಜಖಂಗೊಂಡಿವೆ.
ಆಮ್ನಿಯಲ್ಲಿದ್ದ ಮೋಹನ್ ಹಾಗೂ ಸುನಂದಾ ಎಂಬುವರು ಗಾಯಗೊಂಡಿದ್ದು, ಆಟೋರಿಕ್ಷಾದಲ್ಲಿದ್ದ ಚಾಲಕ ಮತ್ತು ಪ್ರಯಾಣಿಸುತ್ತಿದ್ದ ಶಾಹಿದಾ, ರಷೀದಾ ಮತ್ತು ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.