ಮೈಸೂರು: ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಯ ವಿಚಾರ ಇದೀಗ ಲೋಕಾಯುಕ್ತದ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ಕೆರೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಕರೆಯದೆ ಇಂಟೆಕ್ ಸಂಸ್ಥೆಗೆ ಡಿಪಿಆರ್ ತಯಾರಿಸುವ ಜವಾಬ್ದಾರಿ ನೀಡಿರುವುದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮುಡಾ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀವಾರಿ ನಾಗರಾಜ್ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಪಾರದರ್ಶಕತೆ ಕಾಯ್ದುಕೊಂಡಿಲ್ಲ: 50 ಲಕ್ಷ ರೂ.ಮೇಲ್ಪಟ್ಟ ಯಾವುದೇ ಕಾಮಗಾರಿ ಕೈಗೊಳ್ಳುವ ಸಂದರ್ಭ ನಿಯಮದ ಪ್ರಕಾರ ಟೆಂಡರ್ ಕರೆಯಲೇ ಬೇಕು. ಆದರೆ, ಕುಕ್ಕರಹಳ್ಳಿ ಕೆರೆಗೆ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಟೆಂಡರ್ ಕರೆಯದೆ ನೇರವಾಗಿ ಇಂಟೆಕ್ ಸಂಸ್ಥೆಗೆ ಗುತ್ತಿಗೆ ನೀಡಿರುವುದು ನಿಯಮ ಬಾಹಿರ. ಡಿಪಿಆರ್ ತಯಾರಿಸಲು 63.80 ಲಕ್ಷ ರೂ.ಗಳನ್ನು ಇಂಟೆಕ್ ಸಂಸ್ಥೆಗೆ ನೀಡಲು ತೀರ್ಮಾನಿಸಿ, ಮೊದಲ ಕಂತಿನಲ್ಲಿ 18.82 ಲಕ್ಷ ರೂ.ಗಳನ್ನು ನೀಡಲಾಗಿದೆ. ಕೆರೆಯ ಡಿಪಿಆರ್ ತಯಾರಿಸುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಈ ಕೆರೆಯು ಮೈಸೂರು ವಿಶ್ವ ವಿದ್ಯಾಲಯದ ಸುಪರ್ದಿಯಲ್ಲಿದ್ದು, ಮೈಸೂರು ವಿವಿಯ ಒಪ್ಪಿಗೆ ಪಡೆಯದೆ ಕೆರೆ ಅಭಿವೃದ್ಧಿಯ ಡಿಪಿಆರ್ ತಯಾರಿಸುವ ಜವಾಬ್ದಾರಿಯನ್ನು ಇಂಟೆಕ್ ಸಂಸ್ಥೆಗೆ ನೀಡಿರುವುದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲೆ ಇದೆ ಎನ್ನುತ್ತಾರೆ ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀವಾರಿ ನಾಗರಾಜ್.
ಜಿಲ್ಲಾಧಿಕಾರಿ ಸ್ಪಷ್ಟನೆ ಏನು?: ಕುಕ್ಕರಹಳ್ಳಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಈ ಬಗ್ಗೆ ಅಧ್ಯಯನ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಇಂಟೆಕ್ ಸಂಸ್ಥೆಗೆ ಜಿಲ್ಲಾಡಳಿತ ಕಾನೂನು ಪ್ರಕಾರ ಜವಾಬ್ದಾರಿಯನ್ನು ವಹಿಸಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವಿಚಾರವನ್ನು ಪ್ರಶ್ನಿಸಿ ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2022-23ರ ಪರಿಷ್ಕೃತ ಆಯವ್ಯಯ ಹಾಗೂ 2023-24ರ ಅಂದಾಜು ಆಯವ್ಯಯದಲ್ಲಿ 29.09 ಕೋಟಿ ರೂ.ಗಳನ್ನು ನಗರದ ಕೆರೆಗಳ ಅಭಿವೃದ್ಧಿಗೆ ಕಾಯ್ದಿರಿಸಿದೆ. 6-9-2023 ರಂದು ನಡೆದ ಮೈಸೂರು ನಗರಾಭಿವೃಧ್ದಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿರುವ ಇಂಟೆಕ್ ಸಂಸ್ಥೆಗೆ ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದ ಡಿಪಿಆರ್ ತಯಾರಿಸುವ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಯಿತು. ಡಿಪಿಆರ್ ತಯಾರಿಸಲು 63.80 ರೂ.ಲಕ್ಷ ರೂ.ಗಳನ್ನು ಇಂಟೆಕ್ ಸಂಸ್ಥೆ ಕೋರಿದ್ದು, ಈ ಅನುದಾನವನ್ನು ಪ್ರಾಧಿಕಾರದ ನಿಧಿಯಿಂದ ಭರಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಕ್ಕರಹಳ್ಳಿ ಕೆರೆ ಮಾತ್ರವಲ್ಲದೇ ಸುಮಾರು 22ಕಿ.ಮೀ. ಉದ್ದದ ಪೂರ್ಣಯ್ಯ ಕಾಲುವೆ, ಲಿಂಗಾಂಬುಧಿ ಕರೆಗಳನ್ನು ಒಳಗೊಂಡಂತೆ ಕುಕ್ಕರಹಳ್ಳಿ ಕೆರೆಯ ವಿಸ್ತೃತ ಯೋಜನಾ ವರದಿ ತಯಾರಿಸಲು 63.80 ಲಕ್ಷ ರೂ.ವೆಚ್ಚ ವಾಗಲಿದೆ. ಇಂಟೆಕ್ ಸಂಸ್ಥೆಯು ವಾಣಿಜ್ಯೇತರ ಲಾಭರಹಿತ ಸಂಸ್ಥೆಯಾಗಿರುವುದನ್ನು ಪರಿಗಣಿಸಿ ಮೊದಲ ಹಂತದಲ್ಲಿ ಶೇ.25 ರಷ್ಟು ಅನುದಾನ (18.82 ಲಕ್ಷ ರೂ.)ವನ್ನು ಮುಂಗಡವಾಗಿ ಪಾವತಿಸಲಾಗಿದೆ. ಸಂಸ್ಥೆಯು ಈಗಾಗಲೇ ಏರಿಯಲ್ ಸರ್ವೇ ಮತ್ತು ಇತರೆ ಕಾರ್ಯಗಳನ್ನು ನಿರ್ವಹಿಸಿ ಕುಕ್ಕರಹಳ್ಳಿ ಕೆರೆಯ ಡೆಟಾಬೇಸ್ ವರದಿ ಸಲ್ಲಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಕುಕ್ಕರಹಳ್ಳಿ ಕೆರೆ ಸಮಗ್ರ ಅಭಿವೃದ್ಧಿ ಮತ್ತು ಅಲ್ಲಿನ ಸಸ್ಯರಾಶಿ, ಜಲಚರ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವ ಜನಿಕರಿಗೆ ಉತ್ತಮ ವಾತವರಣ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ. ಕೆರೆಯ ಅಭಿವೃದ್ಧಿ ಅಂದರೆ ಕೇವಲ ಕೆರೆಯ ಸೌಂದರ್ಯಕ್ಕೆ ಮಾತ್ರ ಕೇಂದ್ರೀಕರಿಸದೆ, ಕೆರೆಯ ಸುತ್ತಮುತ್ತಲಿನ ಪರಿಸರಗಳು, ಈ ಕೆರೆಗೆ ಸಂಪರ್ಕಿಸುವ ನಾಲೆಗಳು, ಕೆರೆಯಿಂದ ಹೂಳು ತೆಗೆಯುದು ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.