ವಿಜಯವಾಣಿ ಸುದ್ದಿಜಾಲ ಕಾರ್ಕಳ
ಸಾಣೂರು ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಸಾಣೂರು ಪೇಟೆಯಾಗಿ ಮುರತಂಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಶಾಸಕ ವಿ.ಸುನೀಲ್ ಕುಮಾರ್ ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದರು. ಸಾಣೂರು ಯುವಕ ಮಂಡಲದ ಮೈದಾನದ ಎದುರು ಭಾಗದಿಂದ ಮುದ್ದಣ್ಣನಗರ ಅಡ್ಡರಸ್ತೆವರೆಗೆ 200 ಮೀಟರ್‌ಗಳಷ್ಟು ಗುಡ್ಡ ಕಡಿದಿರುವ ಜಾಗದ ಮಣ್ಣು ಸಡಿಲಗೊಂಡು ರಸ್ತೆಗೆ ಬೀಳುತ್ತಿದ್ದು, ಪಕ್ಕದಲ್ಲಿರುವ 11 ಕೆವಿ ಹೈಟೆನ್ಷನ್, ತಲಾ ಒಂದು ಲಕ್ಷ ಲೀ. ಸಂಗ್ರಹಣಾ ಸಾಮರ್ಥ್ಯದ ಎರಡು ಕುಡಿಯುವ ನೀರಿನ ಓವರ್ ಹೆಡ್‌ಟ್ಯಾಂಕ್ ಹಾಗೂ ಪಕ್ಕದಲ್ಲಿರುವ ತೆರೆದಬಾವಿ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಕಂಡು ಅಸಮಾಧಾನಗೊಂಡ ಶಾಸಕರು, ಕಳೆದ ವರ್ಷವೇ ಈ ಬಗ್ಗೆ ಎಚ್ಚರಿಸಿದ್ದರೂ ನಿರ್ಲಕ್ಷ ತೋರಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ಕಾರ್ಯ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರ್ನಾಟಕ ವಿದ್ಯುತ್ ಕಾಯ್ದೆ ಪ್ರಕಾರ ವಯರ್ ಹಾದು ಹೋಗುವ ಅಕ್ಕಪಕ್ಕದ ಕನಿಷ್ಠ 10 ಮೀ.ವರೆಗೆ ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಅನುಮತಿ ಪಡೆಯಬೇಕೆಂದಿದ್ದು, ಅದನ್ನು ನಿರ್ಲಕ್ಷಿಸಿ, ಸುರಕ್ಷಾ ಕ್ರಮ ಕೈಗೊಳ್ಳದೆ ರಸ್ತೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಕೆಪಿಟಿಸಿಎಲ್ ಸಂಸ್ಥೆಯವರು ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಅಸಮಾಧಾನಗೊಂಡ ಶಾಸಕರು, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಿಬ್ಬಂದಿ ಬಗ್ಗೆ ವಿಚಾರಿಸಿ ಮುಂದಿನ ಭೇಟಿ ಸಂದರ್ಭ ಸರಿಯಾದ ಮಾಹಿತಿಯೊಂದಿಗೆ ಯೋಜನಾಧಿಕಾರಿ ಹಾಗೂ ಮುಖ್ಯ ಇಂಜಿನಿಯರ್‌ಗಳು ಸ್ಥಳದಲ್ಲಿ ಹಾಜರಿರುವಂತೆ ಸೂಚಿಸಿದರು.
ವಿವಿಧೆಡೆ ತೆರವುಗೊಳಿಸಿರುವ ನಾಲ್ಕು ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಿ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು. ಸಾಣೂರು ಗ್ರಾಪಂ ಅಧ್ಯಕ್ಷ ಯುವರಾಜ್ ಜೈನ್, ಪಿಡಿಒ ಮಧು ಎಂಸಿ, ಪಂಚಾಯಿತಿ ಸದಸ್ಯರಾದ ಪ್ರಸಾದ್ ಪೂಜಾರಿ, ಸತೀಶ್ ಪೂಜಾರಿ, ಪ್ರಮೀಳಾ, ಸಾಣೂರು ಗ್ರಾಪಂ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ಸುಜಾತಾ ಶೆಟ್ಟಿ, ತಾಪಂ ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಸಾಣೂರು ಯುವಕ ಮಂಡಲ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಸ್ಥಳೀಯ ಪ್ರಮುಖರಾದ ವಿಶ್ವನಾಥ ಶೆಟ್ಟಿ, ಜಗದೀಶ್ ಕುಮಾರ್, ರತ್ನಾಕರ ಕಾಮತ್, ಪ್ರಕಾಶ್, ರಾಜೇಶ್ ಕೋಟ್ಯಾನ್, ಮಹೇಶ್ ಕುಮಾರ್, ದಿನೇಶ್ ನಾಯಕ್, ವಿನಾಯಕ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ಪುಲ್ಕೇರಿ ಬೈಪಾಸ್ ಸರ್ಕಲ್‌ನಲ್ಲಿ ಇಂದಿರಾ ನಗರಕ್ಕೆ ಹೋಗುವ ಅಡ್ಡರಸ್ತೆಯಲ್ಲಿ ಮಳೆ ನೀರು ಹರಿದುಹೋಗಲು ಕೂಡಲೇ ಚರಂಡಿ ನಿರ್ಮಿಸುವಂತೆ ದಿಲೀಪ್ ಬಿಲ್ಡ್‌ಕಾನ್‌ನ ಮ್ಯಾನೇಜರ್ ಶ್ರೀಬಾಲಾಜಿಯವರಿಗೆ ಸೂಚಿಸಿದರು. ಮುದ್ದುಕೃಷ್ಣ ಇಂಡಸ್ಟ್ರೀಸ್ ಎದುರಿಗಿರುವ ಡೈವರ್ಶನ್ ತಿರುವು ಅಪಾಯಕಾರಿಯಾಗಿದ್ದು, ಕೂಡಲೇ ಈ ಬಗ್ಗೆ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಟ್ರಾನ್ಸ್‌ಫಾರ್ಮರ್ ಹಾಗೂ ಉದ್ದಕ್ಕೂ ಹಾಕಿರುವ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು ಕೂಡಲೇ ಸುರಕ್ಷಾ ಕ್ರಮಗಳನ್ನು ಕೈಗೊಂಡು ಬೀಳದಂತೆ ಎಚ್ಚರ ವಹಿಸುವಂತೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸಾಣೂರು ಗ್ರಾಮದ 12 ಅಡ್ಡರಸ್ತೆಗಳಿಗೆ ಇನ್ನೂ ಡಾಂಬರು ಕಾಮಗಾರಿ ಮಾಡದ ಬಗ್ಗೆ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಆದಷ್ಟು ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸಾಣೂರಿನಲ್ಲಿ ಗುಡ್ಡದ ಮಣ್ಣು ತೆಗೆದ ಪರಿಣಾಮ ಮಳೆಗಾಲದ ಸಂದರ್ಭದಲ್ಲಿ ಸಡಿಲಗೊಂಡು ರಾಷ್ಟ್ರೀಯ ಹೆದ್ದಾರಿಗೆ ಬೀಳುತ್ತಿದ್ದು ಗುಡ್ಡದಲ್ಲಿರುವ ವಿದ್ಯುತ್ ಟವರ್ ಹಾಗೂ ನೀರಿನ ಟ್ಯಾಂಕ್ ಅಪಾಯದ ಮಟ್ಟದಲ್ಲಿರುವ ಬಗ್ಗೆ ‘ವಿಜಯವಾಣಿ’ ಭಾನುವಾರ ವರದಿ ಪ್ರಕಟಿಸಿತ್ತು. ಬಳಿಕ ಮಣ್ಣು ಕುಸಿತಗೊಳ್ಳುತ್ತಿರುವ ಪ್ರದೇಶಕ್ಕೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.