ಜಿಲ್ಲೆ

ವೀಳ್ಯದೆಲೆಗೆ ಅಶುಭ ಕಾಲ

Dakshina Kannada

ಕಡಬ: ಲಾಕ್‌ಡೌನ್‌ನಿಂದ ರೈತರ ಆರ್ಥಿಕ ಮೂಲಗಳಿಗೆ ಏಟು ಬಿದ್ದಿದ್ದು, ಉಪ ಬೆಳೆ ವೀಳ್ಯದೆಲೆಯೂ ಒಂದು.

ವರ್ಷಪೂರ್ತಿ ವೀಳ್ಯದೆಲೆಗೆ ಬೇಡಿಕೆ ಇರುತ್ತದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಶುಭಕಾರ‌್ಯಗಳು ಅಧಿಕವಾಗಿರುವುದರಿಂದ ಧಾರಣೆಯೂ ಉತ್ತಮವಾಗಿರುತ್ತದೆ. ಆದರೆ ಈ ಬಾರಿ ಮದುವೆ ಸಮಾರಂಭಗಳಂತಹ ಶುಭಕಾರ‌್ಯಗಳು, ದೈವ ದೇವರ ವೈದಿಕ ಕಾರ್ಯಕ್ರಮಗಳು ನಡೆಯದೆ ವೀಳ್ಯದೆಲೆಯನ್ನು ಕೇಳುವವರಿಲ್ಲ. ಕನಿಷ್ಠ ಪಕ್ಷ ಬೀಡಾ ತಿನ್ನಲು ಮಾರೋಣವೆಂದರೆ ಅದೂ ಸಾಧ್ಯವಿಲ್ಲ.

ಬಹುತೇಕ ರೈತರು ಶುಭಕಾರ್ಯಗಳಿಗೆ ಬೇಕಾದ ವೀಳ್ಯದೆಲೆ ತಳಿ ಬೆಳೆಸುತ್ತಾರೆ. ಎಲೆಯನ್ನು ನಿರಂತರ ಕಟಾವು ಮಾಡುತ್ತಿದ್ದರೆ ಮಾತ್ರ ಹೊಸ ಎಲೆಗಳು ಚಿಗುರುತ್ತವೆ. ಇಲ್ಲವಾದಲ್ಲಿ ಬಳ್ಳಿ ಸೊರಗುತ್ತದೆ. ಬಳ್ಳಿಯಲ್ಲಿ ಬಾಕಿಯಾಗಿರುವ ವೀಳ್ಯದೆಲೆಯ ಗುಣಮಟ್ಟವೂ ಕಡಿಮೆಯಾಗುತ್ತದೆ. ಇದರಿಂದ ರೈತರು ವಿಚಲಿತರಾಗಿದ್ದಾರೆ ಎನ್ನುತ್ತಾರೆ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಯಧುಶ್ರೀ ಆನೆಗುಂಡಿ.

ಕೆಲವು ವರ್ಷಗಳಿಂದ ಉಪಬೆಳೆಯಾಗಿ ವೀಳ್ಯದೆಲೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಈ ಬಾರಿ ಸುಮಾರು 200 ಬಳ್ಳಿಗಳನ್ನು ನೆಟ್ಟಿದ್ದೆ. ಇಳುವರಿಯೂ ಉತ್ತವಾಗಿತ್ತು. ಲಾಕ್‌ಡೌನ್ ಸಮಸ್ಯೆಯಿಂದ ಎಲ್ಲವೂ ನೆಲಕಚ್ಚಿದೆ. - ಪದ್ಮಯ್ಯ ಗೌಡ ಕಕ್ವೆ, ವೀಳ್ಯದೆಲೆ ಕೃಷಿಕ