ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆ ಸಮುದ್ರದ ಸೈಂಟ್ ಮೇರಿಸ್ ದ್ವೀಪದ ಸಮೀಪದಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಶಟ್ಟಾಫ್ ಲಾಂಚ್ ಮೆನ್ಯುಫೆಕ್ಚರಿಂಗ್ (SHATTAF LAUNCH MANUFACTURING) ಹೆಸರಿನ ಓಮನ್ ದೇಶದ ಮೀನಾಗರಿಕಾ ಬೋಟ್ ವಶಕ್ಕೆ ಪಡೆದಿರುವ ಜಿಲ್ಲಾ ಕರಾವಳಿ ಕಾವಲು ಪೊಲೀಸ್ ಪಡೆ, ಮೂವರನ್ನು ಬಂಧಿಸಿದೆ.
ಮಲ್ಪೆಯ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ (ಸಿಎಸ್ಪಿ) ಠಾಣೆಗೆ ಬಂದ ಖಚಿತ ಮಾಹಿತಿಯಂತೆ ಫೆ.23ರಂದು ಸಂಜೆ ಸೈಂಟ್ ಮೇರಿಸ್ ದ್ವೀಪದ ಬಳಿ ತಪಾಸಣೆ ನಡೆಸಲಾಗಿತ್ತು. ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿ ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಸಂಶಯಾಸ್ಪದವಾಗಿ ನಿಂತಿದ್ದ ವಿದೇಶಿ ಬೋಟ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇಂಡಿಯನ್ ಕೋಸ್ಟ್ ಗಾರ್ಡ್ನ ಸಿಎಸ್ಪಿ, ಕೇಂದ್ರ ಗುಪ್ತಚರ ದಳ, ಕಸ್ಟಮ್ಸ್, ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಅಧಿಕಾರಿಗಳು ತೆರಳಿ ಜಂಟಿ ಪರಿಶೀಲನೆ ನಡೆಸಿದರು. ಬೋಟ್ನಲ್ಲಿ ಯಾವುದೇ ಸಂಶಯಾಸ್ಪದ ವಸ್ತು ದೊರೆತಿಲ್ಲ.
ಜಂಟಿ ಕಾರ್ಯಾಚರಣೆ ಮತ್ತು ತನಿಖೆಯಲ್ಲಿ ಜಿಲ್ಲಾ ಕರಾವಳಿ ಕಾವಲು ಪೊಲೀಸ್ ಘಟಕದ ವರಿಷ್ಠ ಮಿಥುನ್. ಎಚ್.ಎನ್., ಮಂಗಳೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಕಮಾಂಡರ್ ವಿಶಾಲ್ ರಾಣಾ, ಸಿಎಸ್ಪಿ ಕೇಂದ್ರ ಕಚೇರಿಯ ಪೊಲೀಸ್ ಉಪಾಧೀಕ್ಷಕ ಟಿ.ಎಸ್. ಸುಲ್ಪಿ, ಪೊಲೀಸ್ ನಿರೀಕ್ಷಕ ಪ್ರಮೋದಕುಮಾರ್ಪಿ., ಸಿಎಸ್ಪಿ ಠಾಣೆಯ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಮಲ್ಪೆ ಸಿಎಸ್ಪಿ ಠಾಣೆಯ ಪೊಲೀಸ್ ನಿರೀಕ್ಷಕ ಲೋಕೇಶ್, ಪೊಲೀಸ್ ಉಪ ನಿರೀಕ್ಷಕರಾದ ಶಿವಶಂಕರ್, ಫೆಮೀನಾ, ಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಓಮನ್ ದೇಶದ ದುಕಮ್ ಮೀನುಗಾರಿಕಾ ಬಂದರಿನಿಂದ ಫೆ.17ರಂದು ಬೋಟ್ನಲ್ಲಿ ಹೊರಟ ಅಲ್ಲಿನ ಮೂವರು ಮೀನುಗಾರರು ಕಾರವಾರ ಸಮುದ್ರ ಮಾರ್ಗವಾಗಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದತ್ತ ಬಂದಿದ್ದಾರೆ. ಮಲ್ಪೆಯ ಮೀನುಗಾರರು ವಿದೇಶಿ ಬೋಟ್ ಬಂದಿರುವ ಕುರಿತು ನಮಗೆ ಮಾಹಿತಿ ನೀಡಿದ್ದರು. ಪಾಸ್ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿ ಬಂದಿದ್ದರಿಂದ ಅವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ. | ಮಿಥುನ್ ಎಚ್.ಎನ್. ಉಡುಪಿ ಜಿಲ್ಲಾ ಸಿಎಸ್ಪಿ ವರಿಷ್ಠ.