ಜಿಲ್ಲೆ

ವಿಶೇಷ ಒಲಿಂಪಿಕ್ಸ್‌ಗೆ ದಾವಣಗೆರೆಯ ಸುಶ್ರುತ್

ಹರ್ಷ ನ.ಪುರೋಹಿತ

ಡಿ.ಎಂ. ಮಹೇಶ್, ದಾವಣಗೆರೆ
ಸಾಮಾನ್ಯ ಮಕ್ಕಳಂತೆಯೇ ಕಾಣುವ ಈ ಹುಡುಗನಲ್ಲಿ ಮಾತು ವಿರಳಾತಿವಿರಳ. ಬೆಳಗ್ಗೆ ಸೇವಿಸಿದ ಉಪಾಹಾರದ ಹೆಸರನ್ನು ಸಂಜೆಗೆ ಹೇಳಲಾಗದಷ್ಟು ಸ್ಮರಣ ಶಕ್ತಿ ಸಮಸ್ಯೆ ಇದೆ.

ಬೌದ್ಧಿಕ ಮಟ್ಟದ ನ್ಯೂನತೆಯುಳ್ಳ ಈತನಿಗೆ ಸೈಕ್ಲಿಂಗ್ ಎಂದರೆ ಪಂಚಪ್ರಾಣ!

ಜರ್ಮನಿ ರಾಷ್ಟ್ರದ ಬರ್ಲಿನ್‌ನಲ್ಲಿ ಜೂನ್ 12 ರಿಂದ 26ರ ವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ ನಾಲ್ವರು ಮಕ್ಕಳ ಪೈಕಿ ಈತನೂ ಒಬ್ಬ.

ಐದು ವರ್ಷದಲ್ಲಿ ಸೈಕ್ಲಿಂಗ್‌ನಲ್ಲಿ ಪಡೆದ ತರಬೇತಿ ಎತ್ತರಕ್ಕೆ ಕರೆದೊಯ್ದಿದೆ. ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಬಾಲಕ!

ಹದಿನೇಳು ವರ್ಷದ ಎಂ.ಎಸ್.ಸುಶ್ರುತ್ ಈ ಹೆಮ್ಮೆಯ ಹುಡುಗ. ಹರಿಹರ ಮೂಲದ, ದಾವಣಗೆರೆಯಲ್ಲಿ ವಾಸವಿರುವ ಮಂಜುನಾಥ-ಮಮತಾ ದಂಪತಿಯ ಪುತ್ರ.

ಸುಶ್ರುತ್, ಸದ್ಯಕ್ಕೆ ದಾವಣಗೆರೆಯ ಸರಸ್ವತಿ ನಗರದ ಸಂವೇದ ವಿಶೇಷ ಶಾಲೆಯಲ್ಲಿ ಓದುತ್ತಿದ್ದಾನೆ.

ಓದಿನಲ್ಲಿ ಸ್ಪಷ್ಟತೆ ಇಲ್ಲದಿದ್ದರೂ ಈತನ ದೈಹಿಕ ಫಿಟ್ನೆಸ್ ಸೈಕ್ಲಿಂಗ್‌ನತ್ತ ಬರಸೆಳೆದಿದೆ.

ನೇರ ಸ್ಪರ್ಧೆಗೆ ಅಣಿ

ಬುದ್ಧಿಶಕ್ತಿಯಲ್ಲಿ ಕೊರತೆ, ಮಿದುಳಿನ ಪಾರ್ಶ್ವವಾಯು, ಆಟಿಸಂ ಮತ್ತು ಬಹುವಿಧದ ನ್ಯೂನತೆಯ ವಿಶೇಷ ಮಕ್ಕಳಿಗೆಂದೇ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವಿಶೇಷ ಒಲಿಂಪಿಕ್ಸ್ ಸ್ಪರ್ಧೆ ನಡೆಯಲಿದೆ.

ಇದರ ಪೂರ್ವಭಾವಿಯಾಗಿ ನಡೆಯುವ ರಾಷ್ಟ್ರೀಯ ಮಟ್ಟದ ಮೂರೂ ತರಬೇತಿ ಶಿಬಿರದಲ್ಲೂ ಸೈ ಎನಿಸಿಕೊಂಡ ಈತ ಇದೀಗ ನೇರ ಸ್ಪರ್ಧೆಗೆ ಅಣಿಯಾಗಿದ್ದಾನೆ.

ರೋಡ್ ರೇಸ್ ಮತ್ತು ಟೈಂ ಟ್ರಯಲ್ ಎಂಬ ಎರಡು ವಿಧದಲ್ಲಿ ವಿಶೇಷ ಮಕ್ಕಳ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದ್ದು ಇದರಲ್ಲಿ ಸುಶ್ರುತ್‌ನದ್ದು ಎರಡನೆಯ ಆಯ್ಕೆ.

ಸೈಕ್ಲಿಂಗ್ ಶಿಬಿರದಲ್ಲಿ ಭಾರತದಿಂದ ಒಟ್ಟು 280 ಮಂದಿ ಮಕ್ಕಳು ಭಾಗಿಯಾಗಿದ್ದರು.

ಇವರಲ್ಲಿ 9 ನಿಮಿಷ 38 ಸೆಕೆಂಡು ಅವಧಿಯಲ್ಲೇ ಐದು ಕಿಮೀವರೆಗೆ ಸೈಕ್ಲಿಂಗ್ ಮಾಡಿ ಗಮನ ಸೆಳೆದು ಒಲಿಂಪಿಕ್ಸ್‌ನಲ್ಲಿ ಜಾಗ ಗಿಟ್ಟಿಸಿದ್ದಾನೆ.

16-19 ವರ್ಷ ವಯೋಮಾನದವರ ವಿಭಾಗದಲ್ಲಿ ಆಡಲಿದ್ದಾನೆ.

ಪ್ರಥಮ ಸ್ಥಾನ

2021ರ ನವೆಂಬರ್‌ನಲ್ಲಿ ಮಂಗಳೂರಲ್ಲಿ ಜರುಗಿದ್ದ ರಾಜ್ಯ ವಿಶೇಷ ಒಲಿಂಪಿಕ್ಸ್‌ನಲ್ಲಿ ಸುಶ್ರುತ್ ಪ್ರಥಮ ಸ್ಥಾನ ಪಡೆದಿದ್ದ.

2022ರ ಜುಲೈನಲ್ಲಿ ಜಾರ್ಖಂಡ್‌ನ ಬಕಾರೋದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಮೊದಲಿಗನಾಗಿ ಮಿಂಚಿದ್ದ.

ರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರ ಹಾಗೂ ಶಾಲೆಯ ದೈಹಿಕ ಶಿಕ್ಷಕ ದಾದಾಪೀರ್ ತರಬೇತಿ ನೀಡಿದ್ದಾರೆ.

ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಸಂವೇದ ಶಾಲೆ ವಿದ್ಯಾರ್ಥಿಗಳಾದ ಜಿತೇಶ್‌ಭಟ್ ಕಂಚು, ಯಶವಂತರೆಡ್ಡಿ ಬೆಳ್ಳಿ ಪದಕ ಪಡೆದು ಕೀರ್ತಿ ತಂದಿದ್ದರು.

ಇದೀಗ ಸುಶ್ರುತನ ಸರದಿ ಬಂದಿರುವುದು ಶಾಲೆ ಪಾಲಿಗೆ ಅಮೃತ ಘಳಿಗೆ.

ಬಿಹೇವಿಯರ್ ಥೆರಪಿ

ಮಗನ ಮಾತಿನ ದೋಷ ಸರಿಪಡಿಸಲು ಬೆಂಗಳೂರು, ಮೈಸೂರು ಇತ್ಯಾದಿ ಕಡೆಗಳಲ್ಲಿ ಸ್ಪೀಚ್ ಹಾಗೂ ಬಿಹೇವಿಯರ್ ಥೆರಪಿ ನೀಡಿ 10 ವರ್ಷದ ಹಿಂದೆ ದಾವಣಗೆರೆಯ ಸಂವೇದ ಶಾಲೆಗೆ ಸೇರಿಸಿದ್ದೇವೆ.

ಈಗ ಕೇಳಿದ್ದಷ್ಟಕ್ಕೆ ಉತ್ತರ ನೀಡಬಲ್ಲ. ಓದಿದ್ದು ನೆನಪಿನಲ್ಲಿ ಇರುವುದಿಲ್ಲ. ಸದ್ಯಕ್ಕೆ ಅವನ ಗಮನ ಸೈಕ್ಲಿಂಗ್‌ನಲ್ಲಿದೆ.

ಮಗ ಭಾರತವನ್ನು ಪ್ರತಿನಿಧಿಸುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ ಎಂದು ಹೇಳಿಕೊಳ್ಳುತ್ತಾರೆ ತಾಯಿ ಮಮತಾ.

ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್, ಬುದ್ಧಿಮತ್ತೆ ತೊಂದರೆಯುಳ್ಳ ಮಕ್ಕಳಿಗೆ ಉತ್ತಮ ವೇದಿಕೆ. ಗುಜರಾತ್, ಮುಂಬಯಿಯಲ್ಲಿ ಇಂತಹ ಮಕ್ಕಳು ಅಂತಾರಾಷ್ಟ್ರೀಯ ಮಟ್ಟ ಪ್ರವೇಶಿಸಿದರೆ ಕ್ರೀಡಾ ಕೋಟಾದಲ್ಲಿ ಉದ್ಯೋಗಾವಕಾಶವಿದೆ. ಇದು ಕರ್ನಾಟಕದಲ್ಲಿ ಜಾರಿಯಾದರೆ ಇಂತಹ ಮಕ್ಕಳಿಗೆ ಶಕ್ತಿ ಬರಲಿದೆ.ದಾದಾಪೀರ್, ಅಂತಾರಾಷ್ಟ್ರೀಯ ಸೈಕ್ಲಿಂಗ್ ತರಬೇತುದಾರ.