ಜಿಲ್ಲೆ

ಬಸ್ ನಿಲ್ದಾಣ ಬಳಿ ಆಹಾರ ಲಭ್ಯವಾಗಲಿ, ಆಪ್ ನಿಂದ ಪೊಲೀಸ್ ಆಯುಕ್ತರಿಗೆ ಮನವಿ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯ ಚನ್ನಮ್ಮ ವೃತ್ತ ಹಾಗೂ ಹಳೆಯ ಬಸ್ ನಿಲ್ದಾಣದಲ್ಲಿ ಮಧ್ಯ ರಾತ್ರಿಯವರೆಗೂ ಪ್ರಯಾಣಿಕರು ಬಂದು ಹೋಗುತ್ತಿರುತ್ತಾರೆ. ವಾಸ್ತವವಾಗಿ ನೋಡಿದರೆ ರಾತ್ರಿಯಿಡೀ ರಾಜ್ಯ ಹಾಗೂ ಅಂತಾರಾಜ್ಯ ಸಾರಿಗೆ ಬಸ್ ಪ್ರಯಾಣಿಕರಿಂದಾಗಿ ಇದು ಜನಸಂದಣಿಯ ಕೇಂದ್ರಬಿಂದುವಾಗಿದೆ.

ಈ ಸಮಯದಲ್ಲಿ ಏನಾದರೂ ತಿನ್ನಬೇಕು ಎಂದರೆ ಎಲ್ಲಿಯೂ ಆಹಾರ ಮಳಿಗೆಗಳು ಇರುವುದಿಲ್ಲ. ಹಾಗಾಗಿ ಬಂದು ಹೋಗುವ ಜನರ ಅನುಕೂಲಕ್ಕಾಗಿ ಆಹಾರ ಮಳಿಗೆಗಳ ಪರವಾನಿಗೆ ನೀಡಬೇಕು. ಈ ಕುರಿತು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರಿಗೆ ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ಆಮ್ ಆದ್ಮಿ ಪಕ್ಷದ ಮುಖಂಡರು ಮನವಿ ಸಲ್ಲಿಸಿದರು.

ತಡರಾತ್ರಿ ಮಳಿಗೆ ಬಾಗಿಲು ತೆರೆಯಲು ಪರವಾನಗಿ ಇಲ್ಲ. ಕಾನೂನು ಬಾಹಿರ ಕೃತ್ಯ ತಡೆಯಲು ಈ ಕ್ರಮ ಸರಿ. ಆದರೆ, ಬೆಂಗಳೂರು ನಂತರ ಎರಡನೇ ರಾಜಧಾನಿಯಾಗಿ ಅವಳಿನಗರ ಅಭಿವೃದ್ದಿ ಹೊಂದುತ್ತಿವೆ. ಬೆಂಗಳೂರಿನಲ್ಲಿ ಯಾವುದೇ ಸಮಯದಲ್ಲಿ ಹೋದರೂ ಹಸಿದವರಿಗೆ ಆಹಾರ ಸಿಗುತ್ತದೆ.

ಅದೇ ರೀತಿ ಹುಬ್ಬಳ್ಳಿಯಲ್ಲಿಯೂ ಸೌಲಭ್ಯಗಳು ಸಿಗುವಂತಾಗಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸವಲತ್ತು ಕಲ್ಪಿಸುವುದು ಅಗತ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಕ್ಷದ ಧಾರವಾಡ ಜಿಲ್ಲಾ ಅಧ್ಯಕ್ಷ ಪ್ರವಿಣ ನಡಕಟ್ಟಿನ, ಜಿಲ್ಲಾ ರಾಜಕೀಯ ಚಟುವಟಿಕೆ ಉಸ್ತುವಾರಿ ರೇವಣಸಿದ್ದಪ್ಪ ಹುಬ್ಬಳ್ಳಿಯವರು ಮನವಿ ಮಾಡಿದರು.

ಮಹಿಳಾ ಘಟಕದ ಅಧ್ಯೆ ಪ್ರತಿಭಾ ದಿವಾಕರ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಶಾಮ ನರಗುಂದ, ಖಜಾಂಚಿ ಮಲ್ಲಪ್ಪ ತಡಸದ, ಧುರೀಣರಾದ ಎಸ್.ಪಿ. ಹುಬ್ಳಿಕರ, ಹುಸೇನ ಬಾಷಾ ತಳೇವಾಡ, ತಸ್ನಿಮಾ ತಳೇವಾಡ, ಇತರರು ಉಪಸ್ಥಿತರಿದ್ದರು.