ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ
ಚನ್ನಮ್ಮನ ಕಿತ್ತೂರು ತಾಲೂಕಿನ ಹಳೇ ವೀರಾಪುರ ಗ್ರಾಮದ ಬಳಿ ಜೀವನದಿ ಮಲಪ್ರಭೆಯ ಒಡಲಲ್ಲಿರುವ ಮರಳ (ಉಸುಕು)ನ್ನು ಅಕ್ರಮವಾಗಿ ಸಾಗಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ.
ರಾತ್ರಿಯಾದರೆ ಸಾಕು ಜೆಸಿಬಿ ಮೂಲಕ ಮಲಪ್ರಭೆ ಒಡಲು ಬಗೆದು ಟ್ರ್ಯಾಕ್ಟರ್, ಟಿಪ್ಪರ್‌ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಉಸುಕು ಸಾಗಿಸುತ್ತಿದ್ದಾರೆ. ಯಾವುದೇ ಅಧಿಕಾರಿಗಳು, ಪೊಲೀಸರ ಭಯವಿಲ್ಲದೆ ಈ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಸುತ್ತಿದ್ದಾರೆ.
ಹಳೇ ವೀರಾಪುರ ಗ್ರಾಮದ ಬಳಿ ನದಿ ತಿರುವಿನಲ್ಲಿ ನದಿ ನೀರು ಸ್ವಲ್ಪ ಕಡಿಮೆಯಾಗಿರುವುದನ್ನೇ ಲಾಭಮಾಡಿಕೊಂಡಿರುವ ದಂಧೆಕೋರರು ಪ್ರತಿದಿನವೂ ಸಾಕಷ್ಟು ಪ್ರಮಾಣದ ಉಸುಕನ್ನು ಕದ್ದುಕೊಂಡು ತಮಗೆ ಬೇಕೆಂದಲ್ಲಿ ಗುಡ್ಡೆ ಹಾಕಿಕೊಳ್ಳುತ್ತಿದ್ದಾರೆ.
ಈಗಾಗಲೇ ಸಾಕಷ್ಟು ಉಸುಕನ್ನು ಕದ್ದಿದ್ದು, ಈ ದಂಧೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಇದನ್ನು ತಡೆಯಬೇಕು. ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.
ಮರಳು ದಂಧೆಯಿಂದ ನದಿ ನೀರು ಕಲುಷಿತಗೊಳ್ಳುವ ಜತೆ ಅಂತರ್ಜಲಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿದೆ.
ಅಧಿಕಾರಿಗಳ ಬೆಂಗಾವಲು?:ಸರ್ಕಾರಿ ನಿಯಮ ಉಲ್ಲಂಸಿ ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಅಕ್ರಮ ಮರಳು ದಂಧೆ ಬಗ್ಗೆ ತಾಲೂಕಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಕ್ರಮ ಮರಳು ದಂಧೆಗೆಕೋರರಿಗೆ ಅಧಿಕಾರಿಗಳು ಬೆಂಗಾವಲಾಗಿ ನಿಂತಿದ್ದಾರೆ ಎಂಬ ಅನುಮಾನ ಬರುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಜನರಿಂದ ಆರೋಪ ಕೇಳಿಬಂದಿದೆ.
ಏನೇ ಆದರೂ ಸಂಬಂಧಿತ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಕ್ರಮ ಮರಳು ದಂಧೆ ಬಗ್ಗೆ ತಕ್ಷಣ ಪರಿಶೀಲಿಸಲಾಗುವುದು. ಮರಳು ಲೂಟಿಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಶಿವಾನಂದ ಗುಡಗನಟ್ಟಿ, ಸಿಪಿಐ, ಕಿತ್ತೂರು ಪೊಲೀಸ್ ಠಾಣೆ. ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದರೆ, ತಕ್ಷಣ ಕಾನೂನು ಕ್ರಮಕೈಗೊಳ್ಳಲು ಸೂಚಿಸುತ್ತೇನೆ. ರವೀಂದ್ರ ಹಾದಿಮನಿ, ತಹಸೀಲ್ದಾರ್ ಚನ್ನಮ್ಮನ ಕಿತ್ತೂರು. ವೀರಾಪುರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಪರಿಶೀಲಿಸಿ, ಮರಳು ದಂಧೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. ರಿಜ್ವಾನ್ ಎಂ.ಎಸ್., ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಳು ಲೂಟಿ.