ಉಡುಪಿಯ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಡಾ.ಅಶೋಕ್​ ಕಾಮತ್​ ಉದ್ಘಾಟಿಸಿದರು. ಪರೀಕ್ಷಿತ್​ ಶೇಟ್​, ರೋಹಿತ್​ ಕರಂಬಳ್ಳಿ ಶಾಂತಾ ಉಡುಪ, ಸುಬ್ರಹ್ಮಣ್ಯ ಶೇರಿಗಾರ್​, ನಿರ್ಮಲಾ ಎಸ್​. ಉಪಸ್ಥಿತರಿದ್ದರು. 
ಜಿಲ್ಲೆ

ದೊಡ್ಡ ಶಾಲೆಗಳಲ್ಲಿ ಲಭಿಸದು ಮಕ್ಕಳ ವೈಯುಕ್ತಿಕ ಕಾಳಜಿ

ಡಾ.ಅಶೋಕ್​ ಕಾಮತ್​ ಅಭಿಪ್ರಾಯ | ಹಳೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ದೊಡ್ಡ ಶಾಲೆ ಉತ್ತಮವೋ ಅಥವಾ ಸಣ್ಣ ಶಾಲೆ ಉತ್ತಮವೋ ಎಂಬ ಗೊಂದಲ ಪಾಲಕರಲ್ಲಿ ಇರುತ್ತದೆ. ಆದರೆ, ಸಣ್ಣ ಶಾಲೆಯಲ್ಲಿ ಪ್ರತಿ ಮಗುವಿಗೂ ಸಿಗುವ ವೈಯುಕ್ತಿಕ ಗಮನ, ಕಾಳಜಿ ದೊಡ್ಡ ಶಾಲೆಗಳಲ್ಲಿ ಸಿಗುವುದಿಲ್ಲ ಎಂದು ಡಯಟ್​ ಉಪ ಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಅಭಿಪ್ರಾಯಪಟ್ಟರು.

ಉಡುಪಿಯ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯಲ್ಲಿ ದೊಡ್ಡ ಶಕ್ತಿ

ಒಂದನೇ ತರಗತಿ ಎನ್ನುವುದು ಆ ಮಗುವಿನ ಜೀವನದಲ್ಲಿ ಒಂದೇ ಬಾರಿ ಲಭಿಸುತ್ತದೆ. ಹೀಗಾಗಿ ಅದು ಒಳ್ಳೆಯದ್ದಿರಬೇಕು ಎನ್ನುವುದು ಬಹುತೇಕ ಎಲ್ಲ ಪಾಲಕರ ನಿರೀಕ್ಷೆ. ಹೀಗಾಗಿ ಶಿಕ್ಷಣದ ಗುಣಮಟ್ಟವನ್ನು ಆಯಾ ಶಾಲೆಗಳೇ ಖಾತರಿಪಡಿಸಬೇಕು. ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸಬೇಕೆಂದು ಹಳೆಯ ವಿದ್ಯಾರ್ಥಿಗಳು ಸಂಘ ಕಟ್ಟಿಕೊಂಡಿರುವುದು ಮಾದರಿಯಾಗಿದೆ. ಸಂದಲ್ಲಿ ದುಡ್ಡು ಮುಖ್ಯವಲ್ಲ, ಸದಸ್ಯರ ಸಂಖ್ಯೆ ಮುಖ್ಯ. ಸಂಘಟನೆಯಲ್ಲಿ ಹೆಚ್ಚಿನ ಸದಸ್ಯರಿದ್ದಾಗ ಅದೇ ದೊಡ್ಡ ಶಕ್ತಿಯಾಗುತ್ತದೆ ಎಂದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರೀಕ್ಷಿತ್​ ಶೇಟ್​, ಗೌರವಾಧ್ಯಕ್ಷ ರೋಹಿತ್​ ಕರಂಬಳ್ಳಿ ಶಾಲೆಯ ಕೊಡುಗೈ ದಾನಿ ಕೆಎಂ ಉಡುಪ ಅವರ ಪತ್ನಿ ಶಾಂತಾ ಉಡುಪ, ಸುಬ್ರಹ್ಮಣ್ಯ ಶೇರಿಗಾರ್​, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ನಿರ್ಮಲಾ ಎಸ್​. ಉಪಸ್ಥಿತರಿದ್ದರು.