ಜಿಲ್ಲೆ

ಶತಮಾನದ ಶಾಲೆಗೆ ಹಳೇ ಕಟ್ಟಡದ್ದೇ ಚಿಂತೆ!

Dharwad

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ಶತಮಾನ ಕಂಡಿರುವ ಹಳೇ ಹುಬ್ಬಳ್ಳಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂಬರ್ 1 ಶಾಲೆಗೆ ಹಳೇ ಕಟ್ಟಡದ್ದೇ ಚಿಂತೆಯಾಗಿದೆ. 70 ವರ್ಷಗಳ ಹಿಂದೆ ನಿರ್ವಿುಸಿದ್ದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಇಂದೋ ನಾಳೆಯೋ ಬೀಳುವ ಸ್ಥಿತಿಗೆ ತಲುಪಿದೆ. ಆಗಾಗ ಕಾಂಕ್ರೀಟ್ ಉದುರುತ್ತಿದ್ದು, ಅನಾಹುತದ ಮುನ್ಸೂಚನೆ ನೀಡುತ್ತಿದೆ.

1899ರಲ್ಲಿ ಆರಂಭವಾಗಿರುವ ಈ ಶಾಲೆ ಬರೋಬ್ಬರಿ 123 ವರ್ಷ ಪೂರ್ಣಗೊಳಿಸಿದೆ. ಹಳೇ ಕಟ್ಟಡ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲೇ 2004ರಲ್ಲಿ ಹೊಸ ಕಟ್ಟಡ ನಿರ್ವಿುಸಲಾಗಿದೆ. ಸುಸಜ್ಜಿತ ಹೊಸ ಕಟ್ಟಡದಲ್ಲಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್​ರೂಂ, ಡೆಸ್ಕ್​ಗಳು, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರು, 4 ಸಿಸಿ ಟಿವಿ ಕ್ಯಾಮೆರಾ, ಸೈರನ್ ಅಲಾರಾಂ, ಗೋಡೆಗಳ ಮೇಲೆ ಬಣ್ಣದ ಚಿತ್ತಾರ.. ಹೀಗೆ ಹತ್ತಾರು ಸೌಲಭ್ಯ, ವ್ಯವಸ್ಥೆಗಳಿವೆ.

ಹೀಗಿದ್ದರೂ, ಹೊಸ ಕಟ್ಟಡದ ಪಕ್ಕದಲ್ಲೇ ಇರುವ ಹಳೇ ಕಟ್ಟಡವು ಎಲ್ಲರ ಆತಂಕಕ್ಕೆ ಕಾರಣವಾಗಿದೆ. 1950ರಲ್ಲಿ 30/40 ಚದರಡಿ ಜಾಗದಲ್ಲಿ ನಿರ್ವಿುಸಿರುವ ಹಳೇ ಕಟ್ಟಡದಲ್ಲಿ ಮೂರು ಮಹಡಿಗಳಿವೆ. ಕೆಳ ಮತ್ತು ಮೇಲಿನ ಮಹಡಿ ಆರ್​ಸಿಸಿ ಆಗಿದ್ದು, ಎರಡನೇ ಮಹಡಿಯಲ್ಲಿ ತಗಡಿನ ಶೀಟ್​ಗಳಿವೆ. ಕಟ್ಟಡದ ಸಿಮೆಂಟ್ ಕಾಂಕ್ರೀಟ್ ಆಗಾಗ ಕಳಚಿ ಬೀಳುತ್ತಿದೆ. ಮಳೆ ಬಂದರೆ ಸೋರುತ್ತದೆ. ನೆಲ ಹಾಗೂ ಗೋಡೆಗಳು ಬಿರುಕು ಬಿಟ್ಟಿವೆ. ಏನೂ ಅರಿಯದ ಪುಟಾಣಿ ಮಕ್ಕಳು ಈ ಕಟ್ಟಡದ ಬಳಿ ಆಡಲು ಹೋಗುತ್ತಾರೆ. ಅವರನ್ನು ಕಾಯುವುದೇ ಶಿಕ್ಷಕರಿಗೆ ದೊಡ್ಡ ಕೆಲಸವಾಗಿದೆ.

ಈ ಕಟ್ಟಡವನ್ನು ತೆರವುಗೊಳಿಸುವಂತೆ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಈಗಾಗಲೇ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಕಟ್ಟಡ ನೆಲಸಮಗೊಳಿಸುವ ಕಾರ್ಯ ನಡೆದಿಲ್ಲ. ಸಂಬಂಧಪಟ್ಟವರು ಈ ಕೂಡಲೆ ಹಳೇ ಕಟ್ಟಡ ಬೀಳಿಸಿ, ಹೊಸ ಕಟ್ಟಡ ನಿರ್ವಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

ಶ್ರೀ ಗುರುನಾಥಾರೂಢರು ಓದಿದ್ದ ಶಾಲೆ: ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಪರಮ ಶಿಷ್ಯ ಶ್ರೀ ಗುರುನಾಥಾರೂಢರು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಶ್ರೀ ನೀಲಕಂಠ ಮಠದ ಕಾಶಿ ಬಸವರಾಜೇಂದ್ರ ಸ್ವಾಮೀಜಿ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಿದ್ದು, ದೇಶ- ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ ಎನ್ನುತ್ತಾರೆ ಹಳೇ ವಿದ್ಯಾರ್ಥಿ ನಾರಾಯಣ ಪಾಂಡುರಂಗಿ.

ಇಂಗ್ಲಿಷ್ ಮೀಡಿಯಂ ಕಲಿಕೆ: ಎರಡು ವರ್ಷಗಳ ಹಿಂದೆ 160 ಇದ್ದ ಮಕ್ಕಳ ಸಂಖ್ಯೆ ಈ ವರ್ಷ 525ಕ್ಕೆ ಏರಿಕೆಯಾಗಿದೆ. ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಂ. ಕುಂದರಗಿ, ಶಾಲಾ ಅಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಈ ಶಾಲೆಯನ್ನು ಸುಂದರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಕಲಿಕಾ ಪ್ರಕ್ರಿಯೆ ಸದ್ದಿಲ್ಲದೆ ನಡೆದಿದೆ. ಎಲ್​ಕೆಜಿ, ಯುಕೆಜಿ ಹಾಗೂ 1ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಇಬ್ಬರು ಶಿಕ್ಷಕರು ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದಾರೆ. ಸಹ ಶಿಕ್ಷಕಿ ಎಲ್.ಬಿ. ಚುಳಕಿ ಅವರು 50 ಸಾವಿರ ರೂ. ಸ್ವಂತ ಹಣ ಹಾಕಿ ಮಕ್ಕಳಿಗಾಗಿ ವಿಶೇಷವಾದ ಪ್ರಯೋಗಾಲಯ ನಿರ್ವಿುಸಿಕೊಟ್ಟಿದ್ದಾರೆ.