ಜಿಲ್ಲೆ

ಇವಿಎಂ ಯಂತ್ರದ ಮೇಲೆ ಆರೋಪ ಹೊರಿಸೋದು ಕಾಂಗ್ರೆಸ್‍ನ ಹಳೆ ಕಾಯಿಲೆ : ಸಿ.ಟಿ.ರವಿ

ಚಿಕ್ಕಮಗಳೂರು: ಇವಿಎಂ ಯಂತ್ರದ ಮೇಲೆ ಆರೋಪ ಹೊರಿಸೋದು ಕಾಂಗ್ರೆಸ್ಸಿಗರಿಗೆ ಹಳೆ ಕಾಯಿಲೆಯಾಗಿದ್ದು ಅವರ ಸೋಲಿಗೆ ಸಬೂಬು ಹೇಳಲು ಈ ರೀತಿ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.

ನಗರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ರವಿ, ಶಿರಾದಲ್ಲಿ ಟಿ.ಬಿ.ಜಯಚಂದ್ರ ಇವಿಎಂ ಯಂತ್ರದ ಬಗ್ಗೆ ಮಾಡಿರುವ ಆರೋಪಕ್ಕೆ ಉತ್ತರಿಸಿದ ಸಚಿವರು ನ್ಯಾಯಾಲಯದ ತೀರ್ಪು ಬಂದರೆ ನ್ಯಾಯಾಧೀಶರ ಬಗ್ಗೆ ಅನುಮಾನ ಪಡೋದು, ಚುನಾವಣಾ ಆಯೋಗದ ಬಗ್ಗೆ ಅನುಮಾನಿಸುವುದು ಕಾಂಗ್ರೆಸ್‍ಗೆ ಒಂದು ಕಾಯಿಲೆ. ಇವಿಎಂ ಯಂತ್ರದ ವಿಷಯ ಕೋರ್ಟ್ ಮುಂದೆ ಬಂದಾಗ ಯಾರಾದರೂ ಇದ್ದರೆ ಸಾಬೀತುಪಡಿಸಿ ಎಂದು ಚುನಾವಣಾ ಆಯೋಗ ಸಾರ್ವಜನಿಕವಾಗಿ ಸವಾಲು ಹಾಕಿತ್ತು. ಆರೋಪ ಮಾಡಿದವರು ಸಾಬೀತುಪಡಿಸಲು ಯಾರೂ ಹೋಗಲಿಲ್ಲ. ಇವಿಎಂ ಯಂತ್ರಕ್ಕೆ ಹೊರಗಿನಿಂದ ಇಂಟರ್ ನೆಟ್ ಸಂಪರ್ಕ ಇರುವುದಿಲ್ಲ ಎಂದರು.

ಕಾಂಗ್ರೆಸ್ ಗೆದ್ದರೆ ಜನತಾ ಜನಾರ್ಧನನ ತೀರ್ಪು. ಅವರು ಸೋತರೆ ಇವಿಎಂ ಯಂತ್ರದ ಮೇಲೆ ಆರೋಪ ಹೊರಿಸುತ್ತಾರಲ್ಲ ನಾಚಿಕೆಯಾಗೋದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಇಷ್ಟು ವರ್ಷ ಆಡಳಿತ ನಡೆಸಿರುವ ಪಕ್ಷದಲ್ಲಿರುವ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಇವಿಎಂ ಯಂತ್ರ ಮೇಲೆ ಅನುಮಾನಪಡುತ್ತಿದ್ದಾರೆ. ಚುನಾವಣೆಗೆ ಮುನ್ನವೆ ಸೋಲು ಒಪ್ಪಿಕೊಂಡಿರುವ ಮಾನಸಿಕತೆಯಿಂದ ಕೂಡಿದ ಹತಾಶ ಹೇಳಿಕೆ ಇದೆಂದರು.

ಬಿಜೆಪಿ ಭದ್ರಕೋಟೆ ಅಲುಗಾಡಿಸಲು ಸಾಧ್ಯವಿಲ್ಲ

ಯಾರು ಎಷ್ಟೇ ಪ್ರಯತ್ನ ಮಾಡಿದರೂ ಕರ್ನಾಟಕದಲ್ಲಿ ಬಿಜೆಪಿ ಭದ್ರ ಕೋಟೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಲುಗಾಡಿಸಲು ಪ್ರಯತ್ನಪಟ್ಟವರೆ ಕುಸಿದು, ಬಿಜೆಪಿ ಮತ್ತಷ್ಟು ಬಲಶಾಲಿಯಾಗುತ್ತದೆ ಎಂದು ಹೇಳಿದರು.

ಪಕ್ಷದ ಆಂತರಿಕ ವರದಿ ಪ್ರಕಾರ ಆರ್ ಆರ್ ನಗರ, ಶಿರಾ ಎರಡು ಕ್ಷೇತ್ರದಲ್ಲಿ ದೊಡ್ಡ ಮೊತ್ತದ ಅಂತರದಲ್ಲೆ ಗೆಲ್ಲುವುದು ನಿಶ್ಚಿತ. ಈಗಾಗಲೆ ನಡೆದಿರುವ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರರಲ್ಲಿ ಮೊದಲನೆ ಸುತ್ತಿನಲ್ಲಿ ಮತ್ತೊಂದರಲ್ಲಿ ಕೊಂಚ ಕಷ್ಟದಲ್ಲಿ ಗೆಲುವು ಸ್ವಾಗತಿಸುತ್ತದೆ ಎಂದು ಪಕ್ಷದ ಆಂತರಿಕ ವರದಿ ಹೇಳುತ್ತಿದೆ ಎಂದರು.