ಚಿಕ್ಕಬಳ್ಳಾಪುರ: ರಾಜ್ಯದ ಸರ್ಕಾರಿ ನೌಕರರಿಗೆ ನಿಯಮಾನುಸಾರ ಹಳೇ ಪಿಂಚಣಿ ವ್ಯವಸ್ಥೆ, ಕ್ಯಾಷ್‌ಲೆಸ್ ಆರೋಗ್ಯ ಚಿಕಿತ್ಸೆಯ ಸೌಲಭ್ಯವು ತ್ವರಿತವಾಗಿ ಸಿಗಲಿದೆ ಎಂದು ಸರ್ಕಾರಿ ನೌಕರರ ಸಂದ ರಾಜ್ಯಾಧ್ಯಕ್ಷ ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಕೇವಲ ಸನ್ಮಾನ, ಕಾರ್ಯಕ್ರಮಗಳಿಗೆ ಸೀಮಿತವಾಗದೇ ಪ್ರಬಲ ಸಂಟನೆಗೆ ಹೆಚ್ಚು ಒತ್ತು ನೀಡಬೇಕಾಗಿರುವುದು ಅಗತ್ಯ. ಎಲ್ಲರೂ ಒಗ್ಗೂಡಿ ಪ್ರಾಮಾಣಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿಯೊಬ್ಬರ ಹಿತದೃಷ್ಟಿಯಿಂದ ಭಿನ್ನಾಭಿಪ್ರಾಯವನ್ನು ಮರೆಯಬೇಕು. ಆಗ ಮಾತ್ರ ದೊಡ್ಡ ಶಕ್ತಿಯನ್ನು ಹೊಂದಿ, ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಘದ ಬೇಡಿಕೆಗಳ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ೭ ನೇ ವೇತನ ಆಯೋಗ ಜಾರಿಯಾಗಿದ್ದು ಇನ್ನು ಎಲ್ಲ ಸರ್ಕಾರಿ ನೌಕರರಿಗೂ ತಾರತಮ್ಯವಿಲ್ಲದೇ ಹಳೇ ಪಿಂಚಣಿ ವ್ಯವಸ್ಥೆ, ಹಾಗೆಯೇ ಆಸ್ಪತ್ರೆಯಲ್ಲಿ ಸಂಪೂರ್ಣ ಕ್ಯಾಷ್ ಲೆಸ್ ಆರೋಗ್ಯ ಚಿಕಿತ್ಸೆ ಒದಗಿಸುವ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು, ಹೆಚ್ಚುವರಿ ಕೆಲಸದ ಒತ್ತಡ ಸೇರಿದಂತೆ ಸರ್ಕಾರಿ ನೌಕರರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಇದಕ್ಕೆಲ್ಲ ಪರಿಹಾರ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ ಎನ್.ಭಾಸ್ಕರ್, ಸರ್ಕಾರಿ ನೌಕರರ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಗಿರಿಗೌಡ, ಖಜಾಂಚಿ ಶಿವರುದ್ರಯ್ಯ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಗೌರವಾಧ್ಯಕ್ಷ ಎಸ್.ಬಸವರಾಜು, ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಮರನಾರಾಯಣ ಮತ್ತಿತರರು ಇದ್ದರು.
*ಭವನಕ್ಕೆ ಸೂಕ್ತ ಜಾಗ
ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಯ ದೃಷ್ಟಿಯಲ್ಲಿ ಸುಸಜ್ಜಿತ ಭವನವನ್ನು ನಿರ್ಮಿಸಲು ಸೂಕ್ತ ಜಾಗವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭರವಸೆ ನೀಡಿದ್ದಾರೆ. ಜಿಲ್ಲಾ ಸಂಘದ ಮನವಿಯನ್ನು ಆಲಿಸಿದ ಅವರು, ನಿಯಮಾನುಸಾರ ಹಂತ ಹಂತವಾಗಿ ಬೇಡಿಕೆ ಈಡೇರಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ.