ಜಿಲ್ಲೆ

ರೌಡಿ ಶೀಟರ್ ಜತೆ ಮಗಳ ಅನೈತಿಕ ಸಂಬಂಧ: ಬುದ್ಧಿ ಹೇಳಿದ ವೃದ್ಧನ ದುರಂತ ಅಂತ್ಯ!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ. ಮಗಳ ಅಕ್ರಮ ಸಂಬಂಧದ ವಿಚಾರವಾಗಿ ರೌಡಿ ಶೀಟರ್ ಜೊತೆ ಜಗಳಕ್ಕಿಳಿದ್ದಿದ್ದ ವೃದ್ಧ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಚಾಕುವಿನಿಂದ ಮೂರು ಬಾರಿ ಇರಿದು ಕೊಂದ ರೌಡಿ ಶೀಟರ್ ಪರಾರಿಯಾಗಿದ್ದರೆ, ಮತ್ತೊಂದೆಡೆ ಮೃತ ವೃದ್ಧನ ಮಗಳು ತಲೆ ಮರೆಸಿಕೊಂಡಿದ್ದಾಳೆ. ಘಟನೆಯಿಂದ ಇಡೀ ಗ್ರಾಮ ಬೆಚ್ಚಿಬಿದ್ದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದೆರಡು ತಿಂಗಳಿನಿಂದ ಕೊಲೆಗಳ ಮೇಲೆ ಕೊಲೆಗಳಾಗುತ್ತಿವೆ. ವಾರದ ಹಿಂದಷ್ಟೇ ಆಯುಧ ಪೂಜೆಗೆ ದಿನಸಿ ಸಾಮಗ್ರಿ ಖರೀದಿಸಿಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೊಂದು ಮರ್ಡರ್ ಆಗಿದ್ದು, ಮಂಡ್ಯ ತಾಲ್ಲೂಕಿನ ಬೇವುಕಲ್ಲು ಗ್ರಾಮದಲ್ಲಿ 70 ವರ್ಷದ ವೃದ್ಧನನ್ನು ರೌಡಿ ಶೀಟರ್ ಚಾಕುವಿನಿಂದ ಇರಿದು ಕೊಂದಿದ್ದಾನೆ. ಚೆನ್ನವೀರಯ್ಯ ಕೊಲೆಯಾದ ವೃದ್ಧನಾಗಿದ್ದು, ಅದೇ ಗ್ರಾಮದ ರೌಡಿ ಶೀಟರ್ ಮೋಹನ ಚಾಕುವಿನಿಂದ ಮೂರು ಬಾರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆಯಾದ ಚೆನ್ನವೀರಯ್ಯ ಒಬ್ಬ ಮಗ, ಮಗಳು ಹಾಗೂ ಅಳಿಯನ ಜತೆಗೆ ವಾಸವಿದ್ದರು. ಇವರ ಮನೆಯ ಪಕ್ಕದಲ್ಲೇ ರೌಡಿ ಶೀಟರ್ ಮೋಹನ ಹೊಸ ಮನೆ ಕಟ್ಟುತ್ತಿದ್ದು, ಶೇ.80ರಷ್ಟು ಮನೆ ಕೆಲಸ ಪೂರ್ಣಗೊಂಡಿದೆ. ಚೆನ್ನವೀರಯ್ಯನ ಮಗಳು ಕಲಾ ಜತೆ ಮೋಹನ್​ ಅನೈತಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಅದೇ ವಿಚಾರವಾಗಿ ಚೆನ್ನವೀರಯ್ಯ ಹಾಗೂ ಮೋಹನ್ ಜತೆ ಆಗಾಗ ಜಗಳವಾಗುತ್ತಿತ್ತು. ಅಲ್ಲದೇ ತನ್ನ ಮಗಳ ಸಹವಾಸ ಬಿಡುವಂತೆ ತಿಳಿ ಹೇಳಿಯಂದು ಮೋಹನ್​ನ ತಾಯಿ, ತಂದೆಯ ಬಳಿಯೂ ಜಗಳ ಮಾಡಿಕೊಂಡಿದ್ದರಂತೆ.

ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಮೋಹನ್ ತಾಯಿ ಸರೋಜ ಹಾಗೂ ಚೆನ್ನವೀರಯ್ಯ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ರೌಡಿಶೀಟರ್ ಮೋಹನ ಚಾಕುವಿನಿಂದ ಇರಿದು ಚೆನ್ನವೀರಯ್ಯನ್ನು ಹತ್ಯೆ ಮಾಡಿದ್ದಾನೆ.

ಹತ್ತಾರು ಮಂದಿಯ ಎದುರೇ ವೃದ್ಧನ ಕೊಂದ ಮೋಹನ್​ ಎಸ್ಕೇಪ್ ಆಗಿದ್ದಾನೆ. ಇನ್ನೊಂದೆಡೆ ಕಲಾ ತಂದೆಯ ಸಾವಿನ ಬೆನ್ನಲ್ಲೇ ನಾಪತ್ತೆಯಾಗಿದ್ದಾಳೆ. ಮಂಡ್ಯ ಎಸ್ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಸೆರೆಗೆ ಬಲೆ ಬೀಸಿದ್ದಾರೆ. ಘಟನೆಯಿಂದಾಗಿ ಬೇವುಕಲ್ಲು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)