ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಹುಲಿಕುಂಟೆ ಸಮೀಪ ಸೋಮವಾರ ಕಾರು ಡಿಕ್ಕಿಯಾಗಿ ವೃದ್ಧ ಮೃತಪಟ್ಟಿದ್ದಾರೆ. ಹುಲಿಕುಂಟೆ ಕಾಲನಿ ನಿವಾಸಿ ಶಿವಣ್ಣ(65) ಮೃತ. ಬೆಳಗ್ಗೆ ಹುಲಿಕುಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಣ್ಣ ಸ್ಕೂಟರ್ ತಿರುವು ಪಡೆಯುತ್ತಿದ್ದಾಗ ದೊಡ್ಡಬಳ್ಳಾಪುರ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಶಿವಣ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ,
ರಾಷ್ಟ್ರೀಯ ಹೆದ್ದಾರಿ ಹುಲಿಕುಂಟೆ ಸಮೀಪ ಪದೇಪದೆ ಅಪಘಾತ ಸಂಭವಿಸಿ ಸ್ಥಳೀಯರು ಅಕಾಲಿಕವಾಗಿ ಮೃತಪಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೆಂಕಟರಮಣಯ್ಯ ಭಾಗವಹಿಸಿದ್ದರು. ಮೂರು ತಿಂಗಳಲ್ಲಿ ಇಬ್ಬರು ಅಪಘಾತದಲ್ಲಿ ಮೃತರಾಗಿದ್ದಾರೆ. ಅವಶ್ಯವಿರುವ ಭಾಗದಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಹಾಕುವಂತೆ ಟೋಲ್ ಅಧಿಕಾರಿಗಳನ್ನು ಒತ್ತಾಯಿಸಿದರು. ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿದರು. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಕೀಯ ನಾಯಕರ ವಾಗ್ವಾದ: ಅಪಘಾತ ಸ್ಥಳದಲ್ಲಿ ರಾಜಕೀಯ ನಾಯಕರ ವಾಗ್ವಾದ ನಡೆಯಿತು. ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಶಾಸಕ ಧೀರಜ್ ಮುನಿರಾಜ್ ಅವರ ಚಿಕ್ಕಪ್ಪ ಕೇವಶಮೂರ್ತಿ ನಡುವೆ ಮಾತಿನ ಚಕಮಕಿ ನಡೆಯಿತು. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಸ್ಥಳದಲ್ಲಿ ನಾಟಕ ಆಡಬೇಡಿ. ಮಾಡುವ ಕೆಲಸ ಮಾಡಿ, ಈ ರೀತಿ ರಾಜಕೀಯ ಮಾಡಬೇಡಿ. ಸಾವಿನ ಜಾಗದಲ್ಲಿ ರಾಜಕಾರಣ ಮಾಡೋಕೆ ಬಂದಿದ್ದೀಯಾ...ದೊಡ್ಡ ಮನುಷ್ಯ ಎಂದು ಕೇವಶಮೂರ್ತಿ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ಗುಡುಗಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಡಿವೈಎಸ್ಪಿ ರವಿ, ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ ಇದ್ದರು.