ಜಿಲ್ಲೆ

ಯಲಚಿಹಳ್ಳಿ ವೃದ್ಧ ಕರೊನಾಗೆ ಬಲಿ ; ಜಿಲ್ಲಾಸ್ಪತ್ರೆಯಿಂದ ಐವರು ಗುಣಮುಖರಾಗಿ ಬಿಡುಗಡೆ

Tumakuru

ತುಮಕೂರು: ಜಿಲ್ಲೆಯಲ್ಲಿ ಗುರುವಾರ 15 ಮಂದಿಗೆ ಕರೊನಾ ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 612ಕ್ಕೇರಿಕೆಯಾಗಿದೆ. ಒಬ್ಬ ವೃದ್ಧ ಕರೊನಾಗೆ ಬಲಿಯಾಗಿದ್ದಾರೆ.

ತುಮಕೂರು ತಾಲೂಕಿನಲ್ಲಿ 12, ತಿಪಟೂರು, ಶಿರಾ ಹಾಗೂ ಗುಬ್ಬಿ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಗುರುವಾರ ಜಿಲ್ಲಾಸ್ಪತ್ರೆಯಿಂದ ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 222 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಹೋಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 372 ಸಕ್ರಿಯ ಪ್ರಕರಣಗಳಿದ್ದು ಈವರೆಗೆ 18 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ.

72 ವರ್ಷದ ವೃದ್ಧ ಬಲಿ: ಬ್ರೈನ್ ಟ್ಯೂಮರ್‌ಗೆ ತುತ್ತಾಗಿದ್ದ ಗುಬ್ಬಿ ತಾಲೂಕು ಯಲಚಿಹಳ್ಳಿಯ 72 ವರ್ಷದ ವೃದ್ಧ ಜು.12ರಂದು ಬೆಂಗಳೂರಿನ ಸಫಾ ಮೆಡಿಕ್ಯೂರ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. 15ರಂದು ಮೃತಪಟ್ಟಿದ್ದು ಗುರುವಾರ ಸೋಂಕು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ತುಮಕೂರಲ್ಲೇ 12 ಪ್ರಕರಣ: ತುಮಕೂರು ತಾಲೂಕಿನಲ್ಲಿ 12 ಪ್ರಕರಣ ವರದಿಯಾಗಿದೆ. ಇಬ್ಬರು ಪೊಲೀಸರಿಗೆ ಸೋಂಕು ತಗುಲಿದೆ. ಮಾರುತಿನಗರದ 31 ವರ್ಷದ ಕೆಎಸ್‌ಆರ್‌ಪಿ ಪೊಲೀಸ್‌ಗೂ ಸೋಂಕು ದೃಢಪಟ್ಟಿದೆ. ನಾಲ್ವರು ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಸೋಂಕಿತರ ಸಂಪರ್ಕದಲ್ಲಿದ್ದ ಎಸ್‌ಐಟಿ ಮುಖ್ಯರಸ್ತೆಯ 40 ವರ್ಷದ ಮಹಿಳೆಗೆ ಕೆಮ್ಮು ಕಾಣಿಸಿಕೊಂಡಿದ್ದು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಸೋಂಕು ದೃಢಪಟ್ಟಿದ್ದು ಮೂವರು ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಮಹಾಲಕ್ಷ್ಮೀ ನಗರದ 63 ವರ್ಷದ ವೃದ್ಧರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ. ಮೈಕೈ ನೋವು ಕಂಡುಬಂದ ವಿನಾಯಕನಗರದ 42 ವರ್ಷದ ವ್ಯಕ್ತಿ, ಶಿರಾಗೇಟ್‌ನ 67 ವರ್ಷದ ವೃದ್ಧರಿಗೂ ಸೋಂಕು ತಗುಲಿದೆ.

ಜ್ವರ, ತಲೆನೋವು, ಮೈಕೈನೋವು ಕಾಣಿಸಿಕೊಂಡಿದ್ದ ಶ್ರೀನಗರದ 31ವರ್ಷದ ವ್ಯಕ್ತಿ ಜುಲೈ 1ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಗಂಟಲುದ್ರವ ಪರೀಕ್ಷೆಗೆ ಕೊಟ್ಟಿದ್ದು ಜು.16 ರಂದು ಸೋಂಕು ದೃಢಪಟ್ಟಿದೆ. 11 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ವಿನಾಯಕ ನಗರದ 52 ವರ್ಷದ ವ್ಯಕ್ತಿ, ಪಿಎಚ್ ಕಾಲನಿ 8ನೇ ಕ್ರಾಸ್ ನಿವಾಸಿ 65 ವರ್ಷದ ವೃದ್ಧ, ಎಸ್‌ಐಟಿ 6ನೇ ಕ್ರಾಸ್‌ನ 29 ವರ್ಷದ ಮಹಿಳೆ ಹಾಗೂ ಮಲ್ಲಸಂದ್ರದ 27 ವರ್ಷದ ಇಬ್ಬರು ಮಹಿಳೆಯರಿಗೆ, ಕಲ್ಕೆರೆಯ 41 ವರ್ಷದ ಮಹಿಳೆಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ತಿಪಟೂರು ತಾಲೂಕಿನ ನೊಣವಿನಕೆರೆಯ 28 ವರ್ಷದ ವ್ಯಕ್ತಿ, ಶಿರಾ ತಾಲೂಕಿನ ಕಳ್ಳಂಬೆಳ್ಳದ 44 ವರ್ಷದ ವ್ಯಕ್ತಿಗೂ ಸೋಂಕು ಇರುವುದು ದೃಢಪಟ್ಟಿದೆ.

ವಾಸಿಯಾಗದ ಕಾಯಿಲೆಯೇನಲ್ಲ ! : ಕರೊನಾ ಸೋಂಕು ವಾಸಿಯಾಗದ ಕಾಯಿಲೆ ಏನಲ್ಲ. ಧೈರ್ಯದಿಂದ ಇದ್ದರೆ ಸಾಕು. ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಜತೆಗೆ ಆರೈಕೆ ಮಾಡಿದ್ದು ನಾವಿಂದು ಗುಣಮುಖರಾಗಿ ಮನೆಗೆ ಹೋಗುತ್ತಿದ್ದೇವೆ. ಇದು ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ಗೆದ್ದು ಬಂದ ಮೂವರು ಮಹಿಳೆಯರ ಅನಿಸಿಕೆಯಾಗಿತ್ತು.  ಗುರುವಾರ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ ಐದು ಮಂದಿಯಲ್ಲಿ ಹುಳಿಯಾರಿನ ಹಾಗೂ ಕೊರಟಗೆರೆಯ ಮಹಿಳೆಯರಿಬ್ಬರು, ಕರೊನಾ ಸೋಂಕು ಮಾರಣಾಂತಿಕ ಕಾಯಿಲೆಯೆಂದು ಭಯಭೀತರಾಗದೆ ರೋಗ ದೃಢಪಟ್ಟ ಕೂಡಲೇ ಆಸ್ಪತ್ರೆಗೆ ದಾಖಲಾಗಿ. ಧೈರ್ಯಗೆಡಬೇಡಿ ಎಂದರಲ್ಲದೆ, ಜಿಲ್ಲಾಸ್ಪತ್ರೆಯ ಶುಶ್ರೂಷಕಿಯರು, ವೈದ್ಯರ ತಂಡ ಉತ್ತಮ ರೀತಿಯಲ್ಲಿ ಚಿಕಿತ್ಸೆ, ಪೌಷ್ಟಿಕ ಆಹಾರ ನೀಡುವುದರೊಂದಿಗೆ ನಮಗೆ ಮಾನಸಿಕವಾಗಿ ಧೈರ್ಯ ತುಂಬಿ ನಮ್ಮ ಆರೋಗ್ಯವನ್ನು ರಕ್ಷಿಸಿದ್ದಾರೆ. ನಮ್ಮನ್ನು ಸಲಹಿದ ವೈದ್ಯರ ತಂಡ ಹಾಗೂ ಶುಶ್ರೂಷಕಿಯರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು

ಭಾವನಾತ್ಮಕವಾಗಿ ಹರಸುತ್ತಾ ಆಂಬುಲೆನ್ಸ್ ಹತ್ತಿ ಮನೆಗೆ ತೆರಳಿದರು.