ಜಿಲ್ಲೆ

ಹಳೇ ಮೂರ್ತಿಗಳ ಪ್ರತಿಷ್ಠಾಪನೆಗೆ ಪಟ್ಟು, ಬಳ್ಳಾರಿಯಲ್ಲಿ ಬೆಣಕಲ್ ಗ್ರಾಮಸ್ಥರ ಪ್ರತಿಭಟನೆ

ಬಳ್ಳಾರಿ: ತಾಲೂಕಿನ ಬೆಣಕಲ್‌ನಲ್ಲಿ ಶ್ರೀ ದುರುಗಮ್ಮ ಹಾಗೂ ಶ್ರೀ ಮರಿಗಮ್ಮ ದೇವಿಯರ ಹಳೆಯ ಮೂರ್ತಿಗಳನ್ನು ಯಥಾರೀತಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಗ್ರಾಮದಿಂದ ಬೃಹತ್ ರ‌್ಯಾಲಿ ಮೂಲಕ ಡಿಸಿ ಕಚೇರಿಗೆ ಆಗಮಿಸಿ ಎಡಿಸಿ ಮಂಜುನಾಥಗೆ ಮನವಿ ಸಲ್ಲಿಸಿದರು.

12 ವರ್ಷದ ಹಿಂದೆ ದೇವಸ್ಥಾನದ ಮೂರ್ತಿಗಳನ್ನು ನೆಲಸಮ ಮಾಡಲಾಗಿದೆ. ಇದೀಗ ನೂತನ ಮೂರ್ತಿಗಳೊಂದಿಗೆ ದೇವಸ್ಥಾನ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಗ್ರಾಮದ ಕೆಲವರು ಹಳೆಯ ಮೂರ್ತಿ ಪ್ರತಿಷ್ಠಾಪಿಸದೇ ಕಲ್ಲಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಆದರೆ, ಹಳೆಯ ಮೂರ್ತಿಗಳು ಸಂಡೂರು ರಾಜವಂಶಸ್ಥರು ರಕ್ತಚಂದನದಿಂದ ತಯಾರಿಸಿದ್ದಾಗಿವೆ. ಹಳೆಯ ಪರಂಪರೆ ಉಳಿಸುವುದಕ್ಕಾಗಿ ಇವೇ ಮೂರ್ತಿಗಳನ್ನು ಮರಳಿ ಪ್ರತಿಷ್ಠಾಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮದ ಪ್ರಮುಖರಾದ ಟಿ.ಸುರೇಶ, ದುರುಗಣ್ಣ, ನಾಗಪ್ಪ, ರಾಮಜನೇಯಪ್ಪ, ಕೆ.ಮಲ್ಲಿ, ಚಂದ್ರಶೇಖರ ಇತರರಿದ್ದರು.