ಮೈಸೂರು: ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಜಾರಿಗೆ ತಂದಿರುವ ‘ ಸ್ವದೇಶ್ ದರ್ಶನ್’ ಯೋಜನೆಯಡಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಗೆ ಇದೀಗ ಅಭಿವೃದ್ಧಿಯ ಭಾಗ್ಯ ಕೂಡಿ ಬಂದಿದ್ದು, ಇನ್ನು ಮುಂದೆ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಮೈಸೂರು ಮಹಾರಾಜರ ಗತವೈಭವವನ್ನು ಸಾರಲಿದೆ.
ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ‘ಸ್ವದೇಶ್ ದರ್ಶನ್’ ಎರಡನೇ ಹಂತದ ಯೋಜನೆ ಅನುಷ್ಠಾನದ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಮೈಸೂರು ಸಾಂಸ್ಕೃತಿಕ ಹಿರಿಮೆ ಹಾಗೂ ಭವ್ಯವಾದ ಪರಂಪರೆ ಹೊಂದಿರುವ ನಗರವಾಗಿದ್ದು, ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲವಾದ ಅವಕಾಶಗಳು ಇದ್ದು, ಇದಕ್ಕೆ ‘ಸ್ವದೇಶ್ ದರ್ಶನ್’ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಯೋಜನೆಯಡಿ ಹಳೇ ಜಿಲ್ಲಾಧಿಕಾರಿಯನ್ನು ಎರಡನೇ ಹಂತದಲ್ಲಿ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದ್ದು, ಇದಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯೋಜನೆಯಡಿ ಮೈಸೂರು ಸೇರಿದಂತೆ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಯೋಜನೆಯಡಿ ಮೊದಲ ಹಂತದಲ್ಲಿ ಟಾಂಗಾ ರೈಡ್ ಹಾಗೂ ಎಕೋಲಜಿಕಲ್ ಎಕ್ಸ್‌ಪಿರಿನ್ಸ್ ವಲಯ ಅಭಿವೃದ್ಧಿಗೆ 21.17 ಕೋಟಿ ರೂ. ಮೊತ್ತದ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎರಡನೇ ಹಂತದಲ್ಲಿ ಪಾರಂಪರಿಕ ಕಟ್ಟಡವಾಗಿರುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಮೈಸೂರು ಮಹಾರಾಜರು, ದಿವಾನರು, ಆಡಳಿತಗಾರರು ನೀಡಿರುವ ಆಡಳಿತ ಸುಧಾರಣೆ, ಕೊಡುಗೆ ಗಳು ಹಾಗೂ ಮೈಸೂರಿನ ಗತವೈಭವ ಹಾಗೂ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಡಿಪಿಆರ್ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾತನಾಡಿ, ಸ್ಥಳೀಯ ಪ್ರವಾಸೋದ್ಯಮ ಸರ್ಕ್ಯೂಟ್ ಮತ್ತು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಮೈಸೂರು ಇತಿಹಾಸ, ರಾಜ ಪರಂಪರೆ ಹಾಗೂ ಗತವೈಭವ ಬಿಂಬಿಸುವ ಅನುಸಾರ ಡಿಪಿಆರ್ ಸಿದ್ಧಪಡಿಸಿಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮೈಸೂರು ವಿಭಾಗದ ಉಪ ಅರಣ್ಯಾಧಿಕಾರಿ ಡಾ. ಬಸವರಾಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ರುದ್ರೇಶ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಇತರರು ಇದ್ದರು.
ನಾಲ್ವಡಿ ಕಾಲದಲ್ಲಿ ನಿರ್ಮಾಣ: ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣಕ್ಕೆ 8 ಜೂನ್ 2023 ರಂದು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡ ನಂತರ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಖಾಲಿಯಾಗಿದ್ದು, ಈ ಕಟ್ಟಡವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಹಲವು ಸುತ್ತಿನ ಸಭೆಯ ನಂತರ ಇದೀಗ ಅಂತಿಮವಾಗಿ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಳೆ ಡಿಸಿ ಕಚೇರಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷರ ಅಠಾರ ಕಚೇರಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಕಟ್ಟಡವು ಇಂಡೋ-ಸಾರ್ಸೆನಿಕ್ ಮತ್ತು ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪದ ಶೈಲಿಯನ್ನು ಹೊಂದಿದೆ.
ವಸ್ತುಸಂಗ್ರಹಾಲಯದಲ್ಲಿ ಏನೆಲ್ಲ ಇರಲಿದೆ?: ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿಗೊಂಡ ಬಳಿಕ ಕಟ್ಟಡದಲ್ಲಿ ಮೈಸೂರಿನ ಅಪರೂಪದ ಕಲಾಕೃತಿಗಳು, ಹಳೇ ನಾಣ್ಯಗಳು, ತಾಮ್ರಫಲಕಗಳು, ಮೈಸೂರು ಮಹಾರಾಜರ ಕಾಲದ ವೈಭವನ್ನು ತೆರೆದಿಡಲಿದೆ. ಕೈಮಗ್ಗ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಸಹ ಹೊಂದಲಾಗಿದೆ. ಹಳೇ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿಯೇ ಡಿ. ದೇವರಾಜ ಅರಸು ರಸ್ತೆ ಇದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರನ್ನು ವಸ್ತು ಸಂಗ್ರಹಾಲಯದ ಕಡೆಗೆ ಸೆಳೆಯುವ ಉದ್ದೇಶ ಹೊಂದಲಾಗಿದೆ.