ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ವೃತ್ತ ಬಳಿಯ ಶ್ರೀ ಶಿರಡಿ ಸಾಯಿ ಮಂದಿರದ ಸದ್ಭಕ್ತ ಮಂಡಳಿ ವತಿಯಿಂದ ಅತ್ಯಾಧುನಿಕ ಸೌಲಭ್ಯಗಳ ವೃದ್ಧಾಶ್ರಮ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಮಾದರಿ ನೀಲ ನಕ್ಷೆ ಅನಾವರಣ ಜ. 26ರಂದು ಮಧ್ಯಾಹ್ನ 12ಕ್ಕೆ ಮಂದಿರದಲ್ಲಿ ನಡೆಯಲಿದೆ ಎಂದು ಸದ್ಭಕ್ತ ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ತಿಳಿಸಿದರು.
ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಘಟಗಿ ತಾಲೂಕಿನ ಕುರುವಿನಕೊಪ್ಪದಲ್ಲಿ ಇರುವ ದೇವಸ್ಥಾನದ ಜಮೀನಿನಲ್ಲಿ ವೃದ್ಧಾಶ್ರಮ ನಿರ್ಮಿಸಲು 19 ಕೋಟಿ ರೂ.ನ ಯೋಜನೆ ರೂಪಿಸಲಾಗಿದೆ ಎಂದರು.
ಭಕ್ತರ ಸಹಕಾರದಿಂದ ಆಡಳಿತ ಮಂಡಳಿಯು ವೃದ್ಧಾಶ್ರಮ ನಿರ್ಮಾಣದ ಯೋಜನೆ ಹಾಕಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಹೈಟೆಕ್ ವೃದ್ಧಾಶ್ರಮ ಇದಾಗಲಿದೆ. ಮುಂದಿನ ವರ್ಷ ಭೂಮಿಪೂಜೆ ನೆರವೇರಿಸಿ, 2030ರ ವೇಳೆಗೆ ಪೂರ್ಣಗೊಳಿಸಲಾಗುವುದು. ಆರೈಕೆ ಮಾಡಲು ಯಾರೂ ಇಲ್ಲದ ವೃದ್ಧರಿಗೆ ಇಲ್ಲಿ ಉಚಿತ ವಸತಿ ನೀಡಲಾಗುತ್ತದೆ ಎಂದರು.
ಹಿರಿಯ ಜೀವಗಳಿಗೆ ಆಸರೆಯಾಗುವ ಜತೆಗೆ ವೃದ್ಧಾಶ್ರಮದಲ್ಲಿ ಅವರು ಅತ್ಯಂತ ಆನಂದದಾಯಕ ಜೀವನ ಅನುಭವಿಸಬೇಕು ಎನ್ನುವುದು ಭಕ್ತ ಮಂಡಳಿಯ ಉದ್ದೇಶ. ಇದಕ್ಕಾಗಿ 500 ಜನರಿಗೆ ಆಶ್ರಯ ನೀಡುವ ವೃದ್ಧಾಶ್ರಮವು ಏಳು ಮಹಡಿಯ ಕಟ್ಟಡ ಹೊಂದಲಿದೆ. ಇದರಲ್ಲಿ ಪ್ರಾರ್ಥನಾ ಮಂದಿರ, ಅಡುಗೆ ಕೋಣೆ, ಊಟದ ಕೊಠಡಿ, ಕಾರ್ಯಕ್ರಮ ಹಾಲ್, ಸಾಮಾನ್ಯ ಹಾಗೂ ವಿಐಪಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾಗಿ ಉಚಿತ ಚಿಕಿತ್ಸೆ, ಆರೋಗ್ಯ ರಕ್ಷಣೆಗಾಗಿ ಐಸಿಯು ಸೌಲಭ್ಯ ನೀಡಲಾಗುತ್ತಿದೆ ಎಂದರು.
ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ವೃದ್ಧಾಶ್ರಮದ 3ಡಿ ನೀಲನಕ್ಷೆಯನ್ನು ಅನಾವರಣ ಮಾಡಲಿದ್ದಾರೆ. ಶ್ರೀ ಮಂದಿರದ ವೆಬ್ ಸೈಟ್ ಅನ್ನು ಉದ್ಘಾಟಿಸಲಾಗುವುದು ಎಂದು ಮಾಶ್ಯಾಳ ತಿಳಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಉದ್ಯಮಿ ಪ್ರಕಾಶ ಬಾಫನಾ, ನಾರಾಯಣ ನಿರಂಜನ, ಮಹೇಂದ್ರ ಸಿಂಘಿ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಮಂಡಳಿಯ ಶರಣಪ್ಪ ದೇವನೂರ, ಬ್ರಜ ಮೋಹನ ಭುತಡಾ, ನರಸಿಂಗಸಾ ರತನ್, ಪಾಂಡುರಂಗ ಧೋಂಗಡಿ, ಪ್ರಕಾಶ ಚಳಗೇರಿ, ಪವಿತ್ರಾ ಕಡಪಟ್ಟಿ, ಪ್ರಿಯಾಂಕಾ ಕಠಾರೆ, ರಮೇಶ ಕಾಲಿರಾ, ಶಂಕ್ರಪ್ಪ ಯಲಿಗಾರ, ಮೋಹನ ಗಿರಡ್ಡಿ ಇತರರು ಗೋಷ್ಠಿಯಲ್ಲಿದ್ದರು.