ಮಂಡ್ಯ: ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಗರದ ಪ್ರವಾಸಿಮಂದಿರದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಮಂಡ್ಯ ನಗರದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣವಾಗಿಲ್ಲ. ಇನ್ನೂ ಎಷ್ಟು ವರ್ಷಗಳು ಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸೋಣ ಎಂದು ತಿಳಿಸಿದರು.
ಶಾಸಕ ರವಿಕುಮಾರ್‌ಗೌಡ ಗಣಿಗ ಮಾತನಾಡಿ, ಮತ್ತಷ್ಟು ಮಾಹಿತಿ ಪಡೆದು ಅದ್ದೂರಿ ಕಾರ್ಯಕ್ರಮ ಆಯೋಜಿಸಬೇಕು. ಈ ನಿಟ್ಟಿನಲ್ಲಿ ನಗರದ ರೈತ ಸಭಾಂಗಣದಲ್ಲಿ ಜೂ.17ರಂದು ಮತ್ತೊಮ್ಮೆ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಕೃಷ್ಣ ಮಾತನಾಡಿ, ಜೂ.27ರಂದು ಜಿಲ್ಲಾಡಳಿತ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತಾ ಸಭೆಯಲ್ಲಿ ತಿಳಿಸಿದೆ. ಅದಕ್ಕಾಗಿ ಜನಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಲಿ. ದೂರದಿಂದ ಜನರು ಬರಲಿಕ್ಕೆ ಬಸ್ ವ್ಯವಸ್ಥೆಯಾಗಿದೆ. ಐವರು ಸಾಧಕರಿಗೆ ಅಭಿನಂದನೆ ಮಾಡುವುದರ ಬಗ್ಗೆ ಚರ್ಚೆಯಾಗಿದೆ. ಈ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ ಎಂದರು.
ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್, ಒಕ್ಕಲಿಗರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ತಮ್ಮಯ್ಯ, ಜಿಲ್ಲಾಧ್ಯಕ್ಷ ಬಸವೇಗೌಡ, ಉಪಾಧ್ಯಕ್ಷ ಬಿ.ಆರ್.ಕೃಷ್ಣೇಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಎಚ್.ಆರ್.ಅಶೋಕ್‌ಕುಮಾರ್, ಕರವೇ ಜಿಲ್ಲಾಧ್ಯಕ್ಷ ಶಂಕರೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಮ್ಮೇಗೌಡ, ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಗೋಪಾಲ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್, ನಿವೃತ್ತ ಇಂಜಿನಿಯರ್ ದೇವರಾಜ್, ಒಕ್ಕಲಿಗರ ಸಂಘದ ಮುಖಂಡರಾದ ಶಿವಶಂಕರ್, ನಾಗಲಿಂಗಪ್ಪ , ಜಲೇಂದ್ರ, ಎಂ.ಎನ್.ಶಿವರಾಂ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು, ಬಿ.ಎಸ್.ಅನುಪಮಾ ಇತರರಿದ್ದರು.