ಹುಣಸೂರು : ಸೆ.22ರಿಂದ ಆರಂಭಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಒಕ್ಕಲಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸೆ.22ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದಾಳತ್ವದಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಜಾತಿ ಕಾಲಂ 6 ರಲ್ಲಿ ಒಕ್ಕಲಿಗ ಎಂದೂ, ಕಾಲಂ 7ರಲ್ಲಿ ಉಪಜಾತಿ ಸೂಚಿಸಲು, ಆರ್ಥಿಕ ಸ್ಥಿತಿ, ಶೈಕ್ಷಣಿಕ ಸ್ಥಿತಿ ಹಾಗು ಭೂ ಮಾಲೀಕತ್ವದ ಬಗ್ಗೆ ಮಾಹಿತಿ ಹಾಗೂ ಹಳ್ಳಿ, ಪಟ್ಟಣ, ನಗರಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಪ್ರತಿ ಕುಟುಂಬವೂ ಸರಿಯಾಗಿ ಮಾಹಿತಿ ನೀಡಬೇಕು ಎಂದರು.
ನೇಗಿಲಯೋಗಿ ರವಿ, ಚೇತನ್ ಅವರು ಸಮೀಕ್ಷೆಯ ಪ್ರಶ್ನಾವಳಿ ವಿವರಿಸಿದರು. ಸಭೆಯಲ್ಲಿ ಪ್ರಮುಖರಿಗೆ ಜವಾಬ್ದಾರಿ ನಿಗದಿಪಡಿಸಿ ಊರು, ಕೇರಿಗಳಲ್ಲಿ ಮಾಹಿತಿ ನೀಡಿ ಮಾರ್ಗದರ್ಶನ ಮಾಡಲು ವಿನಂತಿಸಲಾಯಿತು.
ಒಕ್ಕಲಿಗರ ಸಂಘದ ಅಧ್ಯಕ್ಷ ಗಣೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗಾನಂದ ಕುಮಾರ್, ನಿವೃತ್ತ ಅಧಿಕಾರಿ ಬಾಲಕೃಷ್ಣ, ಚಿಕ್ಕ ಹುಣಸೂರು ಗೋವಿಂದೇಗೌಡ, ಸುನೀತಾ ಜಯರಾಮೇ ಗೌಡ, ರಾಮಕೃಷ್ಣೆ ಗೌಡ, ಕಿರಂಗೂರು ಬಸವರಾಜ್ ಇತರರು ಪಾಲ್ಗೊಂಡಿದ್ದರು.