ಜಿಲ್ಲೆ

ಮಂಗಳವಾರ ಉಚಿತ ಆರೋಗ್ಯ ಶಿಬಿರ

ಸುನಿಲ್ ಪೊನ್ನೇಟಿ

ಕುಶಾಲನಗರ:

ಆದಿಚುಂಚನಗಿರಿ ವಿಶ್ವ ವಿದ್ಯಾಲಯ, ಆದಿಚುಂಚನಗಿರಿ ಆಸ್ಪತ್ರೆ ಹಾಗೂ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಂಗಳವಾರ (ಫೆ.4) ಕುಶಾಲನಗರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.

ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದ ಆವರಣದಲ್ಲಿ ಅಂದು ಬೆಳಗ್ಗೆ 9 ಗಂಟೆಯಿAದ ಸಂಜೆ 4 ಗಂಟೆ ವರೆಗೆ ನಡೆಯುವ ಆರೋಗ್ಯ ಶಿಬಿರದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಘದ ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ರಕ್ತದಾನ ಮಾಡಲಿದ್ದಾರೆ. ಆದಿಚುಂಚನಗಿರಿ ಆಸ್ಪತ್ರೆಯ ಹೃದ್ರೋಗ, ನರರೋಗ, ಕ್ಯಾನ್ಸರ್, ಮಧುಮೇಹ, ಸ್ತ್ರೀರೋಗ, ಕಿವಿ, ಮೂಗು, ಗಂಟಲು ಸೇರಿದಂತೆ 16ಕ್ಕೂ ಹೆಚ್ಚಿನ ವಿಭಾಗದ ತಜ್ಞ ವೈದ್ಯರು ಹಾಗೂ 110 ಸಿಬ್ಬಂದಿ ಆಗಮಿಸಲಿದ್ದಾರೆ ಎಂದು ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನ ವಿವಿಧ ಗಿರಿಜನ ಹಾಡಿಗಳಿಗೆ ಆದಿವಾಸಿ ಜನರನ್ನು ಕರೆ ತರಲು ಸಂಘದಿAದ ಉಚಿತ ವಾಹನ ವ್ಯವಸ್ಥೆ ಕೂಡ ಮಾಡಲಾಗಿದೆ. ಶಿಬಿರಕ್ಕೆ ಬರುವ ರೋಗಿಗಳಿಗೆ ಹಾಗೂ ವೈದ್ಯರು, ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶಿಬಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಸಿ ಕೆಲವು ವ್ಯಾಧಿಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಿ ಅಗತ್ಯ ಬಂದಲ್ಲಿ ಆಸ್ಪತ್ರೆಗೆ ಬರಲು ಗುರುತಿನ ಚೀಟಿ ನೀಡಲಾಗುತ್ತದೆ. ಹಾಗೂ ಆಸ್ಪತ್ರೆ ವಾಹನದಲ್ಲಿಯೇ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡಿ ಪುನಃ ವಾಪಸ್ ವಾಹನದಲ್ಲಿ ಕಳುಹಿಸಿಕೊಡಲಾಗುತ್ತದೆ. ಈ ಶಿಬಿರದ ಪ್ರಯೋಜನವನ್ನು ಸುತ್ತಮುತ್ತಲಿನ ಗ್ರಾಮಗಳ ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚಂಗಪ್ಪ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಎA. ಪ್ರಕಾಶ್, ನಿರ್ದೇಶಕ ಮಧುಕುಮಾರ್ ಇದ್ದರು.