ಜಿಲ್ಲೆ

ದೇಶಕ್ಕೆ ಒಕ್ಕಲಿಗರ ಕೊಡುಗೆ ಅಪಾರ - ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ - ಸಭಾಭವನವನ್ನು ಲೋಕಾರ್ಪಣೆ, ಸತ್ಯನಾರಾಯಣ ಪೂಜೆ

Mangaluru - Nishantha Narayana

ಪುತ್ತೂರು: ಸಮುದಾಯಗಳು ಉದ್ಧಾರವಾದಾಗ ದೇಶ ಪ್ರಗತಿಗೊಳ್ಳುತ್ತದೆ. ದೇಶ ಸೇವೆ ಹಾಗೂ ನಾಡನ್ನು ಕಟ್ಟುವ ಕಾರ್ಯಕ್ಕೆ ಒಕ್ಕಲಿಗ ಸಮುದಾಯದ ಕೊಡುಗೆ ಅಪಾರವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿದ್ದಾಗ ಸಮುದಾಯದ ಪೂರ್ಣ ವಿಕಸನ ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತೆಂಕಿಲ ಗೌಡ ಸಮುದಾಯ ಭವನದಲ್ಲಿ ಶನಿವಾರ ಪುತ್ತೂರು ಒಕ್ಕಲಿಗ ಗೌಡ ಸಂಘ ಹಾಗೂ ಸಹಸಂಸ್ಥೆಗಳ ಆಶ್ರಯದಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಅಂಗವಾಗಿ ಸಭಾಭವನವನ್ನು ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತ ಸುರೇಂದ್ರ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ಮೋಹನ್ ಗೌಡ ಇಡ್ಯಡ್ಕ, ಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ, ಟ್ರಸ್ಟ್ ಅಧ್ಯಕ್ಷ ಡಿ.ವಿ ಮನೋಹರ್ ಮಾತನಾಡಿದರು.

ಉದ್ಯಮಿ ಕುಶಾಲಪ್ಪ ಗೌಡ, ನಿವೃತ್ತ ಶಿಕ್ಷಕಿ ವಸಂತಿ, ರಾಷ್ಟ್ರಮಟ್ಟದ ಕ್ರೀಡಾಪ್ರತಿಭೆ ಕೀರ್ತಿ ಗುಮ್ಮಟೆಗದ್ದೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸ್ವಾಮೀಜಿ ಗೌರವಿಸಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ ಎಸ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಗೌಡ ಮಹಿಳಾ ಸಂಘದ ಅಧ್ಯಕ್ಷ ವಾರಿಜ ಕೆ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ್, ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಕೆ. ಉಪಸ್ಥಿತರಿದ್ದರು.

ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ ವಂದಿಸಿದರು. ವಸಂತ ವೀರಮಂಗಲ ಮತ್ತು ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

ಬದುಕು ಅರ್ಥಹೀನವಾಗದಂತೆ ಮನುಷ್ಯ ಜೀವನಾನ್ವೇಷನೆಗೆ ಮೊದಲ ಆದ್ಯತೆ ನೀಡಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಂಘಟನೆ ಆಸಕ್ತಿವಹಿಸಬೇಕಾಗಿದೆ. ಆಧುನಿಕ ಆವಿಷ್ಕಾರಗಳ ನಡುವೆ ಕಲ್ಮಷಗೊಳ್ಳುತ್ತಿರುವ ಮನಸ್ಸುಗಳಿಗೆ ಹಿರಿಯರ ಮಾರ್ಗದರ್ಶನ ಅಗತ್ಯ.

|ಡಾ. ಧರ್ಮಪಾಲನಾಥ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠ