ಕೃಷಿ ಕಾಯ್ದೆ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ರೈಲು ನಿಲ್ದಾಣದಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟಿಸಿದರು. ಬಾಬಾಗೌಡ ಪಾಟೀಲ, ಚೂನಪ್ಪ ಪೂಜೇರಿ, ರಾಘವೇಂದ್ರ ನಾಯ್ಕ, ಪ್ರಕಾಶ ನಾಯ್ಕ, ಸೋಮು ರೈನಾಪುರ ಇದ್ದರು. 
ಜಿಲ್ಲೆ

ತೈಲ ಬೆಲೆ ಏರಿಕೆಗೆ ಖಂಡನೆ

ಬೆಳಗಾವಿ : ಕೃಷಿ ಕಾಯ್ದೆ, ತೈಲ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ರೈಲು ತಡೆ ಚಳವಳಿ ಬೆಂಬಲಿಸಿ ನಗರದ ರೈಲು ನಿಲ್ದಾಣದಲ್ಲಿ ಗುರುವಾರ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅನ್ನದಾತರು ಉಭಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತರು ರೈಲು ತಡೆಯಲು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ರೈತರನ್ನು ವಶಕ್ಕೆ ಪಡೆದು, ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.

ಕೇಂದ್ರ ಸರ್ಕಾರ ರೈತರ ವಿರೋಧಿಯಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ನಾಲ್ಕೈದು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಕಾಯ್ದೆ ಹಿಂಪಡೆಯದೆ ರೈತರನ್ನು ಸಮಸ್ಯೆಗೆ ಸಿಲುಕಿಸಿದೆ. ಮಾತ್ರವಲ್ಲದೆ ರಾಜ್ಯ ಸರ್ಕಾರ ಸಹ ರೈತರ ವಿರೋಧಿಯಾಗಿ ನಿಯಮ ರೂಪಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ: ದಿನ ಬಳಕೆ ವಸ್ತು, ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ರೈತರು, ಸಾಮಾನ್ಯ ವರ್ಗದ ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಪರಿಣಾಮ ರೈತ ಸಮುದಾಯ ಆರ್ಥಿಕ ಸಮಸ್ಯೆಗೆ ಸಿಲುಕಿದೆ. ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ರೈತ ಸಂಘಟನೆ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯ್ಕ, ಪ್ರಕಾಶ ನಾಯ್ಕ, ಜಯಶ್ರೀ ಗೂರಣ್ಣವರ, ಸೋಮು ರೈನಾಪುರ, ಮಲ್ಲಿಕಾ ವಾಗ್ಗಿ, ಅಂಬಿಕಾ ಪಿ. ಇತರರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮುಂದುವರಿಯಲಿದೆ. ಉಭಯ ಸರ್ಕಾರಗಳು ರೈತರ ವಿಷಯದಲ್ಲಿ ಮೊಂಡುತನ ಪ್ರದರ್ಶಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ.| ಬಾಬಾಗೌಡ ಪಾಟೀಲ ರೈತ ಸಂಘಟನೆ ಮುಖಂಡ