ಜಿಲ್ಲೆ

ರೈತರ ಬದುಕು ಕಟ್ಟಿಕೊಳ್ಳಲು ಹೊಸ ಬೆಳೆಗಳ ಪರಿಚಯ - ಕೃಷಿಕ ಮುರುವ ಮಹಾಬಲ ಭಟ್ ಅನಿಸಿಕೆ - ಎಣ್ಣೆ ತಾಳೆ ಬೆಳೆ ಕುರಿತು ಮಾಹಿತಿ

Mangaluru - Nishantha Narayana

ವಿಟ್ಲ: ಹೊಸ ಬೆಳೆಗಳನ್ನು ಪರಿಚಯಿಸುವ ಮೂಲಕ ರೈತರ ಬದುಕು ಕಟ್ಟಿಕೊಳ್ಳುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಸರ್ಕಾರದ ಮಾಹಿತಿ ಪಡೆದುಕೊಳ್ಳುವ ಕಾರ್ಯ ಕೃಷಿಕರಿಂದ ನಡೆಯಬೇಕು ಎಂದು ಕೃಷಿಕ ಮುರುವ ಮಹಾಬಲ ಭಟ್ ಹೇಳಿದರು.

ಅಳಿಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಅಳಿಕೆ ಗ್ರಾಮ ಪಂಚಾಯಿತಿ, ಕಂಪು ಕೃಷಿ ಮತ್ತು ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕುದ್ದುಪದವು, ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘ, ಅಳಿಕೆ ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ಸಹಯೋಗದಲ್ಲಿ ಎಣ್ಣೆ ತಾಳೆ ಬೆಳೆ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿ, ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರೈತರು ಜೀವನಶೈಲಿಗೆ ಅನುಗುಣವಾಗಿ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ವೈಜ್ಞಾನಿಕ ಪದ್ಧತಿ ಮೂಲಕ ಕೃಷಿ ನಡೆಸಲು ಆಧುನಿಕ ಯಂತ್ರಗಳು ಬಂದಿದ್ದರೂ, ಯುವ ಸಮುದಾಯ ಕೃಷಿಯತ್ತ ಆಸಕ್ತಿ ತೋರಿಸುತ್ತಿಲ್ಲ ಎಂದರು.

ಅಳಿಕೆ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಭಾಸ್ಕರ ಮಡಿಯಾಲ, ಕಂಪು ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಮಾಣಿಮೂಲೆ ಗೋವಿಂದ ಭಟ್ ಪ್ರಾರ್ಥಿಸಿದರು. ಸಹಕಾರ ತೋಟಗಾರಿಕೆ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಪ್ರಸ್ತಾವನೆಗೈದರು. ಕಂಪು ಕಚೇರಿ ಮೇಲ್ವಿಚಾರಕ ನಾಗರಾಜ ವಂದಿಸಿದರು.

ವಿವಿಧ ವಿಷಯದ ಬಗ್ಗೆ ಮಾಹಿತಿ

ಅಡಕೆಗೆ ಪರ್ಯಾಯ ಬೆಳೆಯಾಗಿ ಎಣ್ಣೆ ತಾಳೆ ಬೆಳೆ ಪರಿಚಯ, ಅವಕಾಶಗಳು ಹಾಗೂ ತೊಟಗಾರಿಕೆ ಇಲಾಖೆ ಸವಲತ್ತುಗಳ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ ಪ್ರದೀಪ ಡಿಸೋಜ, ದ.ಕ ಜಿಲ್ಲೆಯಲ್ಲಿ ಎಣ್ಣೆ ತಾಳೆ ಬೆಳೆ ಪ್ರಸಕ್ತ ಸ್ಥಿತಿ ಗತಿ, ಆರ್ಥಿಕತೆ ಮತ್ತು ಬೇಸಾಯ ತಾಂತ್ರಿಕತೆಗಳ ಬಗ್ಗೆ ಕೃಷ್ಣ ವೈ.ಟಿ., ತಾಳೆ ಕೃಷಿ ಅನುಭವ ಹಂಚಿಕೆ ಮತ್ತು ರೈತರೊಂದಿಗೆ ಸಂವಾದವನ್ನು ಸುಳ್ಯ ಆಲೆಟ್ಟಿಯ ಅನುಭವಿ ತಾಳೆ ಬೆಳೆ ಕೃಷಿಕ ಅಶೋಕ ಪ್ರಭು, ಶ್ರೀ ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಭಟ್ ಕೊಂಕೋಡಿ ಭಾಗವಹಿಸಿದರು.