ಚಿಂತಾಮಣಿ : ಪೊಲೀಸ್ ಇಲಾಖೆ ಹಲವು ಮಾಹಿತಿಗಳನ್ನು ಹಂಚಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಅಧಿಕೃತ ಜಾಲತಾಣವನ್ನು ತೆರೆದಿದ್ದು, ಬಹುತೇಕ ಎಲ್ಲ ಜಿಲ್ಲಾ ಕೆಂದ್ರಗಳಲ್ಲಿ ಅಧಿಕೃತ ಜಾಲತಾಣ ಅಥವಾ ವೆಬ್‌ಸೈಟ್ ತೆರೆದಿದೆ. ಚಿಕ್ಕಬಳ್ಳಾಪುರ ವೆಬ್‌ಸೈಟ್‌ನಲ್ಲಿ ಸುದ್ದಿಗಳು ಪ್ರಕಟವಾಗುವ ಅಪರಾಧ ಪ್ರಕರಣಗಳ ಪಕ್ಷಿನೋಟ ಪುಟದಲ್ಲಿ ಲೋಪ ಕಂಡುಬಂದು ಒಂದು ತಿಂಗಳು ಸಮೀಪಿಸುತ್ತಿದ್ದು, ಅದರತ್ತ ಗಮನಹರಿಸುವವರೇ ಇಲ್ಲದಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಹಲವಾರು ಅಪರಾಧ ಪ್ರಕರಣಗಳು ಮತ್ತು ಆ ಪ್ರಕರಣ ದಾಖಲಾಗಿರುವ ಬಗ್ಗೆ ಎಫ್‌ಐಅರ್ ಸಂಖ್ಯೆ ಮತ್ತು ದಿನಾಂಕ ಸಮೇತ ಸಂಪೂರ್ಣ ವಿವರಗಳನ್ನು ಪ್ರತಿದಿನ ವೆಬ್‌ಸೈಟ್‌ನ ಇತ್ತೀಚಿನ ಸುದ್ದಿಗಳು ಪಟ್ಟಿಯಲ್ಲಿ ಪ್ರಕಟಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಜಿಲ್ಲಾ ಪೊಲಿಸ್ ವೆಬ್‌ಸೈಟ್‌ನ ಅಪರಾಧ ಪ್ರಕರಣಗಳ ಪಕ್ಷಿನೋಟದ ಪುಟದಲ್ಲಿ ಲೋಪ ಕಂಡು ಬಂದಿದ್ದು, ಸೆಪ್ಟೆಂಬರ್ 1ರಿಂದ ಇದುವರೆಗೂ ಎಫ್‌ಐಅರ್ ಸಂಖ್ಯೆ ಮತ್ತು ದಿನಾಂಕ ಸಮೇತ ಸಂಪೂರ್ಣ ವಿವರಗಳ ಪುಟ ಓಪನ್ ಆಗುತ್ತಿಲ್ಲ. ಇತ್ತೀಚಿನ ಸುದ್ದಿಗಳು ಪುಟದಲ್ಲಿ ದಿನಾಂಕವನ್ನು ತೆರೆದ ತಕ್ಷಣ ‘500… ಊಪ್ಸ್…. ಸಮ್‌ತಿಂಗ್ ವೆಂಟ್ ರಾಂಗ್ ಆನ್ ಅವರ್ ಸರ್ವರ್ಸ್ ಗೋ ಹೋಮ್’ ಎಂಬ ಪುಟ ತೆರೆದುಕೊಳ್ಳುತ್ತಿದೆಯೇ ಹೊರತು ಅಪರಾಧ ಪ್ರಕರಣಗಳ ಪಕ್ಷಿನೋಟ ಲಭ್ಯವಾಗುತ್ತಿಲ್ಲ.
ಈ ಕುರಿತು ಅನ್‌ಲೈನ್‌ನಲ್ಲಿ ಕೆಲವರು ದೂರು ಸಲ್ಲಿಸಿದರೆ, ಇನ್ನು ಕೆಲವರು ಹಿರಿಯ ಅಧಿಕಾರಿಗಳ ಗಮನಕ್ಕೆ ವೆಬ್‌ಸೈಟ್ ಸಮಸ್ಯೆಯ ಚಿತ್ರವನ್ನು ಹಾಕಿ ದುರಸ್ತಿಗೆ ಮನವಿ ಮಾಡಿದರೂ ಸಮಸ್ಯೆಯನ್ನು ನೀಗಿಸುವಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.