ಬಾಗಲಕೋಟೆ: ಅಡುಗೆ ಅನಿಲದ ಬೆಲೆಯನ್ನು 200 ರೂ. ಇಳಿಸಿದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ದ ವ್ಯಂಗ್ಯ ಮಾಡಿರುವ ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಅಯ್ಯೋ ಏನ್ರಪ್ಪ ಅವರ ಕರ್ಮ? ನೂರು ರೂ. ಏರಿಕೆ ಮಾಡಿ ಹತ್ತು ರೂ. ಇಳಿಸಿದರೆ ಅದಕ್ಕೆ ಏನಾದರೂ ಅರ್ಥ ಇದೆಯೇನ್ರಿ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ತೆರಳುತ್ತಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಷ್ಟು ವರ್ಷ ಗ್ಯಾಸ್ ಬೆಲೆ ಏಕೆ ಇಳಿಸಲಿಲ್ಲ. ಈಗ ನಾವು ಹೇಳುತ್ತೇವೆ ರಕ್ಷ ಬಂಧನ ಅಂತ. ನಮ್ಮ ತಾಯಿಯರಿಗೆ ಹಾಗೂ ಸಹೋದರಿಯರಿಗೆ ತಿಂಗಳಿಗೆ 2 ಸಾವಿರ ರೂ. ಕೊಡುತ್ತಿದ್ದೇವೆ. ಇದು ರಕ್ಷಾ ಬಂಧನ ಎಂದು ಹೇಳಿದರು.
ಇವತ್ತು ಮನೆ ನಡೆಸುವ ತಾಯಿ, ಸಹೋದರಿಗೆ ಸ್ವಾಭಿಮಾನ, ಧೈರ್ಯ ಬಂದಿವೆ. ಕುಟುಂಬ ನಡೆಸುವ ಅಡತಡೆ ಹೊಡೆದು ಹಾಕಿ, ಸ್ವಾಭಿಮಾನದ ಬದಕನ್ನ ಕಲಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಇದು ನನಗೆ ಬಹಳ ಖುಷಿ ತಂದಿದೆ ಎಂದರು.
ಕಾಂಗ್ರೆಸ್ ನ ನೂರು ದಿನಗಳ ಆಡಳಿತದ ಬಗ್ಗೆ ಬಿಜೆಪಿ ಬಿಡುಗಡೆ ಮಾಡಿರುವ ಕೈಪಿಡಿ ಬಗ್ಗೆ ಕಿಡಿಕಾರಿದ ಸಚಿವ ತಿಮ್ಮಾಪುರ, ಅವರಿಗೇನು ಬೇರೆ ಕೆಲಸ ಇಲ್ಲ. ಐದು ವರ್ಷ ಏನು ಮಾಡಿದ್ದಾರೆ. ರೈತರಿಗೆ ವಿದ್ಯುತ್ ಸಮಸ್ಯೆ ಆಗುತ್ತಿದೆ. ಇದಕ್ಕೆಲ್ಲ ಬಿಜೆಪಿ ಸರ್ಕಾರ ಯಾವುದೇ ಯೋಜನೆ ಮಾಡಿದೇ ಇರುವುದೇ ಕಾರಣ. ಈಗ ರಾಜ್ಯವನ್ನು ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಈ ಬಗ್ಗೆ ಯೋಜನೆ ಕೈಗೊಂಡಿದ್ದರೆ ಇವತ್ತು ವಿದ್ಯುತ್ ಸಮಸ್ಯೆ ಇರುತ್ತಿರಲಿಲ್ಲ. ಸರ್ಕಾರಗಳು ತಮ್ಮ ಅಧಿಕಾರ ಅವಧಿಯಲ್ಲಿ ಹೊಸ ಹೊಸ ಯೋಜನೆ ಮಾಡಿದಾಗ ಅದು ಮುಂದಿನ ಪೀಳಿಗಿಗೆ ಸಹಾಯ ಆಗುತ್ತದೆ. ಬಿಜೆಪಿ ಸರ್ಕಾರ ಅದನ್ನು ಮಾಡಲೇ ಇಲ್ಲ. ಹೀಗಾಗಿ ಇವತ್ತು ರೈತರು ವಿದ್ಯುತ್ ಗಾಗಿ ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅವರು(ಬಿಜೆಪಿ) ಮಾಡಿದ ತಪ್ಪಿನಿಂದಾಗಿ ನಾವು ಇವತ್ತು ಸಂಕಷ್ಟ ಅನುಭವಿಸಬೇಕಾಗಿದೆ. ಹೀಗಾಗಿ ಇಂತವರ ಮಾತಿಗೆ ಜನ ಬೆಲೆ ಕೊಡ್ತಾರಾ? ಯಾರು ಬೆಲೆ ಕೊಡುವುದಿಲ್ಲ ಎಂದರು.
ಒಂದು ಕಡೆ ಗ್ಯಾರಂಟಿ, ಮತ್ತೊಂದು ಕಡೆ ಕಮಿಷನ್‌ನಿಂದ ರಾಜ್ಯ ದಿವಾಳಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಟೀಕೆಗೆ ತಿರುಗೇಟು ನೀಡಿದ ತಿಮ್ಮಾಪುರ, ದಿವಾಳಿ ಆದವರು ಹೇಳುತ್ತಾರಾ? ರಾಜ್ಯ ದಿವಾಳಿ ಮಾಡಿ ಹೋದವರ ಮಾತಿಗೆ ಜನ ಬೆಲೆ ಕೊಡುತ್ತಾರಾ? ಪಾಪ ಅವರು, ಅವರ ಪಕ್ಷ ದಿವಾಳಿ ಆಗಿದೆ. ವಿರೋಧ ಪಕ್ಷದ ನಾಯಕ ಮಾಡಲು ಕೇಂದ್ರಕ್ಕೆ ಹೋದರೆ ಇವರನ್ನು ಮರಳಿ ನೋಡುತ್ತಿಲ್ಲ. ರಾಜ್ಯ ದಿವಾಳಿ ಮಾಡಿರಿ ಅಂತ ಹೇಳಿ ಅವರ ಪಕ್ಷದವರೆ ಇವರನ್ನು ನೋಡುತ್ತಿಲ್ಲ. ಇನ್ನು ಜನರು ಇವರನ್ನು ಹೇಗೆ ನೋಡುತ್ತಾರೆ ಎಂದು ಲೇವಡಿ ಮಾಡಿದರು.