ದೊಡ್ಡಬಳ್ಳಾಪುರ ಕೆಸ್ತೂರಿನಲ್ಲಿ ಶನಿವಾರ ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಜಂಟಿ ಕ್ಷೇತ್ರ ಭೇಟಿಯಲ್ಲಿ ಜೋಳ ಬೆಳೆ ಪರಿಶೀಲನೆ ನಡೆಸಲಾಯಿತು. ಕೃಷಿ ಇಲಾಖೆ ಉಪನಿದೇಶಕಿ ಗಾಯತ್ರಿ, ತಾಲೂಕು ಸಹಾಯಕ ನಿರ್ದೇಶಕಿ ರಾಜೇಶ್ವರಿ, ವಿಜ್ಞಾನಿ ಡಾ.ಹನುಮಂತರಾಯಪ್ಪ, ಡಾ ವೆಂಕಟೇಗೌಡ, ಡಾ. ಈಶ್ವರಪ್ಪ ಇದ್ದರು. 
ಜಿಲ್ಲೆ

ಮುಸುಕಿನ ಜೋಳ ರಕ್ಷಣೆಗೆ ಮಾರ್ಗೋಪಾಯ

ಶಿವರಾಜ.ಎಂ

ವಿಜ್ಞಾನಿ ಡಾ.ಹನುಮಂತರಾಯಪ್ಪ ಸಲಹೆ

ದೊಡ್ಡಬಳ್ಳಾಪುರದಲ್ಲಿ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತ್ತೀಚಿನ ದಿನಗಳಲ್ಲಿ ಮುಸುಕಿನ ಜೋಳ ಬೆಳೆಯಲ್ಲಿ ಸ್ಪೊಡಾಪ್ಟರಾ ಜಾತಿಗೆ ಸೇರಿದ (ಸ್ಪೊಡಾಪ್ಟರಾ ಪ್ರುಜಿಫೆರಾ) ಹುಳ ಬಾಧೆಯು ಹೆಚ್ಚಾಗಿ ಕಂಡುಬಂದಿದ್ದು ಇವುಗಳ ನಿಯಂತ್ರಣಕ್ಕೆ ರೈತರು ಗಮನ ನೀಡಬೇಕು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಹನುಮಂತರಾಯ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಕೆಸ್ತೂರಿನಲ್ಲಿ ಶನಿವಾರ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಆತ್ಮ ಯೋಜನೆಯಡಿ ವಿಜ್ಞಾನಿಗಳೊಂದಿಗೆ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಕೀಟನಾಶಕ ಸಿಂಪಡಿಸದೇ ಬೆಳೆಯುವ ಬೆಳೆಗೂ ಸಹ ಔಷಧ ಸಿಂಪಡಿಸುವ ಸಂದಿಗ್ಧ ಪರಿಸ್ಥಿತಿ ಒದಗಿ ಬಂದಿದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಾಂಧರ್ಭಿಕ ಶಿಫಾರಸ್ಸಿನಲ್ಲಿ ರೈತರು ಕೈಗೊಳ್ಳಬಹುದಾದ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದ್ದಾರೆ ಇದರ ಬಗ್ಗೆ ಗಮನ ಹರಿಸಿ ರೋಗ ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.
ಮಾಗಿ ಉಳುಮೆ ಸಹಕಾರಿ: ರಾಗಿ ಮತ್ತು ಮುಸುಕಿನ ಜೋಳ ದೊಡ್ಡಬಳ್ಳಾಪುರ ತಾಲೂಕಿನ ಮುಖ್ಯ ಬೆಳೆಗಳಾಗಿವೆ.ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಇದುವರೆಗೂ ತಾಲೂಕಿನಲ್ಲಿ 1441 ಹೆಕ್ಟರ್ ಗಳಷ್ಟು ಮುಸುಕಿನ ಜೋಳ ಬಿತ್ತನೆಯಾಗಿದೆ ಆದ್ದರಿಂದ ತಾಲೂಕಿನ ರೈತರು ಈ ರೋಗಬಾಧೆ ಹತೋಟಿಗೆ ಇಲಾಖೆ ನೀಡಿರುವ ಮಾರ್ಗೋಪಾಯವನ್ನು ಪಾಲನೆ ಮಾಡಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಗಾಯತ್ರಿ ತಿಳಿಸಿದರು. ಮಾಗಿ ಉಳುಮೆ ಮಾಡುವುದು ಅಥವಾ ಆಳವಾದ ಉಳುಮೆ ಮಾಡುವುದರಿಂದ ಮೊಟ್ಟೆ ಅಥವಾ ತತ್ತಿಗಳನ್ನು ನಾಶಗೊಳಿಸಬಹುದು ಎಂದು ತಿಳಿಸಿದರು.
ಬಿತ್ತನೆ ಸಮಯದಲ್ಲಿ ಪ್ರತಿ ಕಿ.ಗ್ರಾಂ. ಬೀಜಕ್ಕೆ 6 ಮಿ.ಲೀ. ಸೈನಂಟ್ರಿನೀಲಿಪ್ರೋಲ್ ಶೇ. 19.8 + ಥಯಾಮೆಥಾಕ್ಸಾಮ್ ಶೇ. 19.8 ಅನ್ನು ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು, ಬೇವಿನ ಬೀಜದ ಕಷಾಯವನ್ನು ಶೇ.5 ರಂತೆ ಅಥವಾ ಬೇವಿನ ಮೂಲದ ಕೀಟನಾಶಕ ಅಜಾಡಿರೆಕ್ಟಿನ್ 1500ಪಿ.ಪಿ.ಎಂ. 5 ಮೀ. ಲೀ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸುಳಿಯಲ್ಲಿ ಸಿಂಪರಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿಹುಳುಗಳನ್ನು ನಾಶಪಡಿಸಬಹುದು ಎಂದು ತಿಳಿಸಿದರು.