ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಸರ್ವೇ ನಂ. 706/ಎ ನಲ್ಲಿರುವ 0.80 ಸೆಂಟ್ ಸ್ಮಶಾನ ಜಾಗವನ್ನು ಜಂಟಿ ಅಳತೆ ಮಾಡಲು ಮುಂದಾದ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳಿಗೆ ತಾಲೂಕು ಶ್ರೀ ಆರ್ಯವೈಶ್ಯ ಸಮಾಜದ ಮುಖಂಡರು ಹಾಗೂ ಶ್ರೀ ವಾಸವಿ ವಿದ್ಯಾಸಂಸ್ಥೆ ಪದಾಧಿಕಾರಿಗಳು ಅವಕಾಶ ನೀಡದೆ ನೋಟಿಸ್ ನೀಡದೆ ಹೇಗೆ ಸರ್ವೇ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಸೀಲ್ದಾರ್ ಅವರು 706/ಎ ನಲ್ಲಿರುವ 0.80 ಸೆಂಟ್ ಸ್ಮಶಾನ ಜಾಗವನ್ನು ಜಂಟಿಯಾಗಿ ಅಳತೆ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆ ಭೂಮಾಪಕ ಪುಟ್ಟರಾಜು, ಆರ್.ಐ ನಿರಂಜನ್, ನಗರಸಭೆ ಆರ್.ಐ. ರಾಘವೇಂದ್ರ ಇತರ ಅಧಿಕಾರಿಗಳು ಶ್ರೀ ವಾಸವಿ ವಿದ್ಯಾಸಂಸ್ಥೆ ಬಳಿಗೆ ತೆರಳಿದ್ದರು.
ಈ ವೇಳೆ ಆರ್ಯವೈಶ್ಯ ಸಮಾಜ ತಾಲೂಕು ಅಧ್ಯಕ್ಷ ಹಾಗೂ ಶ್ರೀ ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ ಹಾಗೂ ಸಂಘದ ಇತರ ಪದಾಧಿಕಾರಿಗಳು ಸರ್ವೇಗೆ ಬಂದ ಅಧಿಕಾರಿಗಳನ್ನು ನೋಟಿಸ್ ನೀಡದೆ ಏಕೆ, ಹೇಗೆ ಸರ್ವೇ ಮಾಡುತ್ತಿದ್ದೀರಿ, ಮೊದಲು ನೋಟಿಸ್ ನೀಡಿ ನಂತರ ನಾವೇ ಅವಕಾಶ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸರ್ಕಾರಿ ಜಾಗವಾಗಿರುವುದರಿಂದ ನೋಟಿಸ್ ಕೊಡಲು ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದಾಗ ಎ.ಡಿ.ಕುಮಾರ ಕೃಷ್ಣ ಅವರು ಸರ್ಕಾರಿ ಜಾಗ ಎಂದು ಹೇಳುವುದಕ್ಕೆ ಯಾವ ದಾಖಲೆ ತಂದಿದ್ದೀರಿ ಎಂದು ಪ್ರಶ್ನಿಸಿದರು.
ಈ ವೇಳೆ ಆರ್ಯವೈಶ್ಯ ಸಮಾಜದ ಮುಖಂಡರು ನೋಟಿಸ್ ನೀಡಿ ಅದಕ್ಕೆ ಮೊದಲು ನಾವು ಉತ್ತರಿಸುತ್ತೇವೆ. ಆಮೇಲೆ ಸರ್ವೇಗೆ ಅವಕಾಶ ನೀಡುವುದಾಗಿ ಹೇಳಿದರು. ನಂತರ, ಸರ್ವೇ ಅಧಿಕಾರಿಗಳು ಹಿಂದಿರುಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಭೂಮಾಪಕ ಮಾತನಾಡಿ ಪುಟ್ಟರಾಜು, ಶ್ರೀ ವಾಸವಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಕೆಲವು ದಾಖಲೆಗಳನ್ನು ನೀಡಿದ್ದಲ್ಲದೆ ಮನವಿ ಪತ್ರವೊಂದನ್ನು ನೀಡಿದ್ದಾರೆ. ಇದನ್ನು ಪರಿಶೀಲಿಸಿ ತಹಸೀಲ್ದಾರ್ ಅವರಿಗೆ ವರದಿ ನೀಡುತ್ತೇವೆ ಎಂದು ಹೇಳಿದರು.
ತಹಸೀಲ್ದಾರ್ ಆದೇಶ ಉಲಂಘನೆ ಆರೋಪ
ಸರ್ವೇ ವಿಚಾರಕ್ಕೆ ಸಂಬಂಧಿಸಿದಂತೆ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶದ ಅಧ್ಯಕ್ಷ ದಶರತ್ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ವೇ ಅಧಿಕಾರಿಗಳು, ತಹಸೀಲ್ದಾರ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಆಗಬೇಕಿದ್ದ ಸರ್ವೇ ನಂ. 706/ಎ ನಲ್ಲಿರುವ 0.80 ಸ್ಮಶಾನ ಜಾಗವನ್ನು ಅಳತೆ ಮಾಡದೆ ಶ್ರೀ ವಾಸವಿ ವಿದ್ಯಾ ಸಂಸ್ಥೆ ಜತೆ ಶಾಮೀಲಾಗಿ ಹಿಂದಕ್ಕೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.