ಕುಶಾಲನಗರ: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಆವರಣದಲ್ಲಿ ಮಂಗಳವಾರ ನಡೆದ ಮಾವಿನಹಳ್ಳಹಾಡಿ, ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮಸಭೆಯಲ್ಲಿ ಅಧಿಕಾರಿಗಳು ಪಾಲ್ಗೊಂಡು ಆದಿವಾಸಿಗಳ ಸಮಸ್ಯೆ ಆಲಿಸಿದರು.
ಗಿರಿಜನ ಸಮುದಾಯದ ಹಿರಿಯ ಮುಖಂಡ ಜೆ.ಪಿ.ರಾಜು ಅವರು ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿದರು.
ಸಭೆಯ ಆರಂಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಕೂಡ್ಲಪ್ಪ, ಸಮಾಜ ಕಲ್ಯಾಣ ಇಲಾಖೆಯ ರವಿ ಮಾತನಾಡಿ, ಮಾವಿನಹಳ್ಳಹಾಡಿ ೧೬, ಕಟ್ಟೆಹಾಡಿ ಗ್ರಾಮಗಳ ೨೩ ಕುಟುಂಬಗಳಿಗೆ ವೈಯಕ್ತಿಕವಾದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಜೊತೆಗೆ ಅರಣ್ಯ ಹಕ್ಕುಪತ್ರಗಳನ್ನು ಸಹ ವಿತರಣೆ ಮಾಡಲಾಗಿದೆ. ಅರಣ್ಯದಂಚಿನಲ್ಲಿ ವಾಸಿಸುವ ಗಿರಿಜನ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಆದರೆ, ಆರ್.ಟಿ.ಸಿ.ಯಲ್ಲಿ ಹೆಸರು ಸೇರ್ಪಡೆಯಾಗಿಲ್ಲ ಎಂಬ ದೂರು ಬಂದಿರುವ ಕಾರಣ ಈ ಬಗ್ಗೆ ಈಗಾಗಲೇ ಅರ್ಜಿಗಳನ್ನು ಉಪವಿಭಾಗಾಧಿಕಾರಿಯಲ್ಲಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಂತ್ರಿಕ ತೊಂದರೆಯಿಂದ ಆರ್.ಟಿ.ಸಿ.ಯಲ್ಲಿ ಹೆಸರು ಸೇರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದ್ದು, ಇದರಿಂದ ಕೃಷಿ ಸಂಬಂಧಿತ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಈವರೆಗೂ ಜಾತಿ, ಆದಾಯ ಹಾಗೂ ಆಧಾರ್ ಕಾರ್ಡ್‌ಗಳನ್ನು ನೊಂದಾವಣಿ ಮಾಡಿಸಲು ಸಾಧ್ಯವಾಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಂಜನಾಯಪಟ್ಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಮಾತನಾಡಿ, ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆಯಡಿ ಗಿರಿಜನ ಕುಟುಂಬಗಳಿಗೆ ಮನೆ ಮಂಜೂರು ಮಾಡಲಾಯಿತು. ಪಂಚಾಯತಿ ವತಿಯಿಂದಲೂ ೨೧ ಮನೆಗಳು ಮಂಜೂರು ಆಗಿದ್ದು, ಜಿ.ಪಿ.ಎಸ್ ಮೂಲಕ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಹಕ್ಕುಪತ್ರ ಪಡೆದ ಕುಟುಂಬಗಳು ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಜಾತಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಿ, ವಿಶೇಷ ಕ್ಯಾಂಪ್ ನಡೆಸಿ ನೊಂದಾಯಿಸಿಕೊಂಡು ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಗಿರಿಜನ ಮುಖಂಡರಾದ ಆರ್.ಕೆ.ಚಂದ್ರು ಮಾತನಾಡಿ, ೪೨ ವರ್ಷಗಳಿಂದ ಬುಡಕಟ್ಟು ಜನರು ನಿರಂತರ ಅನ್ಯಾಯ ಸಹಿಸಿಕೊಂಡು ಬರುತ್ತಿದ್ದೇವೆ. ಅರಣ್ಯ ನಂಬಿ ನಾವು ಬದುಕುತ್ತಿದ್ದೇವೆ. ಆದರೆ, ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲ. ನಾವು ಆಡು, ಕುರಿ, ಜೇನು ಪೆಟ್ಟಿಗೆ ಕೇಳಿಲ್ಲ. ಕಾಡಿನಲ್ಲಿರುವ ವಸ್ತುಗಳು ನಮ್ಮದು, ಮರ ಕಡಿದು ಸಾಗಿಸುವವರನ್ನು ಬಿಡುವ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಜೇನು, ನಲ್ಲಿ, ಸೀಗೆ ಕುಯ್ಯುವ ಗಿರಿಜನರ ಮೇಲೆ ಕೇಸು ಹಾಕುತ್ತ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮ ನ್ಯಾಯಯುತ ಹಕ್ಕುಗಳ ಈಡೇರಿಕೆ ಒತ್ತಾಯಿಸಲು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆರ್.ಕೆ.ಚಂದ್ರು ಎಚ್ಚರಿಕೆ ನೀಡಿದರು.
ಗಿರಿಜನ ಮುಖಂಡ ಜೆ.ಟಿ.ಕಾಳಿಂಗ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅಡಿ ವೈಯಕ್ತಿಕ ಹಕ್ಕುಪತ್ರ, ಸಮುದಾಯ ಹಕ್ಕು ದಾಖಲೆಗಳನ್ನು ನೀಡಬೇಕು. ಅನುಭವದಲ್ಲಿನ ಜಮೀನು ಹಕ್ಕುಪತ್ರ ನೀಡಬೇಕು. ಅದಕ್ಕೆ ಸಂಬಂಧಪಟ್ಟ ಹಾಗೆ ೧೬ಅರ್ಜಿಗಳು ಬಂದಿವೆ ಎಂದು ತಿಳಿಸಿದರು.
ಮಾವಿನಹಳ್ಳ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಜೆ.ಎಂ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಮಾವೋಜಿ ರಕ್ಷಿತ್, ಕಟ್ಟೆಹಾಡಿ ಸಮಿತಿಯ ಅಧ್ಯಕ್ಷರಾದ ಅಪ್ಪು, ಮಾವಿನಹಳ್ಳ ಹಾಡಿಯ ಪುಟ್ಟಣ್ಣ, ವಿರೂಪಾಕ್ಷಪುರ ಗ್ರಾಮ ಸಮಿತಿ ಗಿರಿ, ಸಜ್ಜಹಳ್ಳಿ ಸಮಿತಿ ಅಧ್ಯಕ್ಷ ವಿಶ್ವ, ಮುಖಂಡ ಧರ್ಮ, ಗ್ರಾ.ಪಂ.ಕಾರ್ಯದರ್ಶಿ ಶೇಷಗಿರಿ ಉಪಸ್ಥಿತರಿದ್ದರು.