ಕೋಟ: ಸಾಲಿಗ್ರಾಮ ಸೇರಿದಂತೆ ವಿವಿಧೆಡೆ ಗಾಯಗೊಂಡ ಪ್ರಾಣಿಗಳನ್ನು ಆರೈಕೆ ಮಾಡುತ್ತಿದ್ದ ಸುಧೀಂದ್ರ ಐತಾಳ್ ಮನೆಯ ಪ್ರಾಣಿ ಸಂಗ್ರಹಾಲಯಕ್ಕೆ ಪೇಟಾದೊಂದಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಜೋಡಿಸಿ ದಾಳಿ ನಡೆಸಿದ ಬಗ್ಗೆ ಆಡಳಿತ ಪಕ್ಷದ ಸದಸ್ಯ ಶ್ಯಾಮಸುಂದರ್ ನಾಯರಿ ಆಕ್ರೋಶ ವ್ಯಕ್ತಪಡಿಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಪಪಂ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶ್ಯಾಮಸುಂದರ್, ಪ್ರಾಣಿಗಳಿಗೆ ಸಂಬಂಧಿಸಿದ ಇಲಾಖೆ ದಾಳಿ ಮಾಡಲಿ. ಆದರೆ ಪಟ್ಟಣ ಪಂಚಾಯಿತಿಯನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದು ಸರಿಯಲ್ಲ. ಪೇಟಾ ನೀತಿಯೇ ಕಾನೂನು ಬಾಹಿರವಾಗಿದ್ದು ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಪ್ರತಿಕ್ರಿಯಿಸಿ, ನಾನು ಓರ್ವ ಪಪಂ ಮುಖ್ಯಾಧಿಕಾರಿಯಾಗಿ ಜಿಲ್ಲಾಧಿಕಾರಿಗಳ ನಿರ್ದೇಶ ಪಾಲಿಸಿದ್ದೇನೆ ಎಂದರು. ಇದರಿಂದ ಆಕ್ರೋಶಗೊಂಡ ಸದಸ್ಯ ಶ್ಯಾಮಸುಂದರ್ ನಾಯರಿ, ಪಪಂ ಕೌನ್ಸಿಲರ್ ಸಭೆಗೆ ಬಾರದೆ ಅಲ್ಲಿ ದಾಳಿಯಲ್ಲಿ ನಿಮ್ಮ ಪಾತ್ರ ಒಪ್ಪಲಾಗದು. ಜನಸಾಮಾನ್ಯರು ಕೌನ್ಸಿಲರನ್ನು ಪ್ರಶ್ನಿಸುತ್ತಾರೆ ಎಂಬ ಮಾತಿಗೆ ಮುಖ್ಯಾಧಿಕಾರಿ ಹಾಗೂ ಶ್ಯಾಮಸುಂದರ್ ನಾಯರಿ ನಡುವೆ ವಾಕ್ ಸಮರ ಏರ್ಪಟ್ಟಿತು. ಪೇಟಾ ಸಂಸ್ಥೆಯ ಪ್ರಮುಖರು ಸಭೆಗೆ ಮಾಹಿತಿ ನೀಡಿ, ಪ್ರಾಣಿ ಆರೈಕೆ ಮಾಡುತ್ತಿದ್ದ ಸುಧೀಂದ್ರ ಐತಾಳ್ ಅವರಿಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಾಹಿತಿ ನೀಡಿದ್ದೇವೆ. ಅಲ್ಲಿನ ಅವ್ಯವಸ್ಥೆ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ನಾಲ್ಕೈದು ಬಾರಿ ಮಾಹಿತಿ ನೀಡಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಲು ಸಲಹೆ ನೀಡಿದ್ದೇವೆ. ಆದರೆ ಅವರು ಪಾಲಿಸದ ಕಾರಣ ಡಿಸಿ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪಪಂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಸದಸ್ಯ ರಾಜು ಪೂಜಾರಿ ಮಾತನಾಡಿ, ಐತಾಳ್ ಅವರು ಪ್ರಾಣಿ ಸಂಗ್ರಹಾಲಯವನ್ನು ಸ್ವಚ್ಛ ಹಾಗೂ ಕಾನೂನಾತ್ಮಕವಾಗಿ ನಿರ್ವಹಿಸುವುದಾದರೆ ಅವಕಾಶ ಕಲ್ಪಿಸಬಹುದು ಎಂಬ ನಿರ್ಧಾರ ಪಂಚಾಯಿತಿಯದ್ದು ಎಂದು ಉಲ್ಲೇಖಿಸಿದರು. ವಿಪಕ್ಷ ನಾಯಕ ಶ್ರೀನಿವಾಸ ಅಮೀನ್, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ, ಇತರ ಇಲಾಖಾ ಅಧಿಕಾರಿಗಳು ಇದ್ದರು.
ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರುದ್ಧ ಸ್ಥಳೀಯರು ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಿರುವಾಗ ಅದನ್ನು ಅಭಿವೃದ್ಧಿಪಡಿಸುವುದು ಸರಿಯೇ, ಮುಂದೊಂದು ದಿನ ನಮ್ಮ ವಿರುದ್ಧವಾಗಿ ಕೋರ್ಟ್‌ನಿಂದ ಆದೇಶ ಬಂದರೆ ಪ್ರಯೋಜನ ಶೂನ್ಯವಾಗುತ್ತದೆ ಎಂದು ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಆಕ್ಷೇಪಿಸಿದರು. ಮುಖ್ಯಾಧಿಕಾರಿ ಅಜಯ್ ಉತ್ರಿಸಿ, ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಕಾಮಗಾರಿ ಅಂತಿಮ ಹಂತದಲ್ಲಿದೆ ಯಾಕೆ ಅಪಸ್ವರ ಎಂದು ಪ್ರಶ್ನಿಸಿದರು.