ಸುಂಟಿಕೊಪ್ಪ: ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ಸಂಪರ್ಕ ಕಲ್ಪಿಸುವ ರಸ್ತೆಯು ಕುಸಿಯುವ ಭೀತಿಯ ಬಗ್ಗೆ ಮಂಗಳವಾರ ನಿವಾಸಿಗಳು ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಾಗದ ಮಾಲೀಕರಿಗೆ ಎಚ್ಚರಿಕೆ ನೀಡಿ ಪರಿಹಾರ ಒದಗಿಸುವಂತೆ ಸೂಚಿದರು.
ಅಧಿಕಾರಿಗಳ ಸೂಚನೆಯಂತೆ ಮಾಲೀಕರು ಒಪ್ಪಿಗೆ ನೀಡಿ ತಾತ್ಕಾಲಿಕವಾಗಿ ಮಣ್ಣಿನ ಚೀಲ ಇಡುವ ಮೂಲಕ ಕುಸಿಯದಂತೆ ಜಾಗ್ರತೆ ವಹಿಸಲಾಗುವುದು. ಮಳೆಗಾಲದ ನಂತರ ಸ್ವಂತ ಖರ್ಚಿನಲ್ಲಿ ತಡೆಗೋಡೆ ನಿರ್ಮಿಸಿ ಕೊಡುವ ಬಗ್ಗೆ ಲಿಖಿತ ರೂಪದಲ್ಲಿ ಕೊಟ್ಟರು.
ಈ ಭಾಗದಲ್ಲಿ ಅಂದಾಜು 200ಕ್ಕೂ ಹೆಚ್ಚು ವಾಸದ ಮನೆಗಳಿದ್ದು, ಖಾಸಗಿ ವ್ಯಕ್ತಿಯೊಬ್ಬರು ನಿವೇಶನವು ಹೊಂದಿದ್ದಾರೆ. ಅವರು ಅವೈಜ್ಞಾನಿಕವಾಗಿ ಮಣ್ಣು ತೆಗೆದು ಸಮತಟ್ಟುಗೊಳಿಸಿದ್ದರಿಂದ ಬರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಮುನ್ಸೂಚನೆಯಿಂದಾಗಿ ಪಂಪ್‌ಹೌಸ್ ಬಡಾವಣೆಯ ನಿವಾಸಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಗಳವಾರ ಒತ್ತಾಯಿಸಿದ್ದರು. ಮಂಗಳವಾರವೇ ಕಂದಾಯ ಇಲಾಖೆಯ ಉಪತಹಸೀಲ್ದಾರ್ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ನಾಗೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಿ.ಎಂ.ಸುರೇಶ್, ವಸಂತಿ, ರಫೀಕ್ ಖಾನ್, ಜಿನಾಸುದ್ದೀನ್, ಪ್ರಸಾದ್ ಕುಟ್ಟಪ್ಪ, ಸ್ಥಳೀಯ ನಿವಾಸಿಗಳಾದ ಬಿ.ಕೆ.ಮೋಹನ್, ರಾಜು, ರಘು, ಸಂದೀಪ್, ಹಮೀದ್ ಇತರರು ಇದ್ದರು.