ಗೊಳಸಂಗಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಿಂದ ಹದಗೆಟ್ಟಿದ್ದ ಓಂ ನಗರದ ರಸ್ತೆ ಸ್ವಚ್ಛತೆ ಕಾರ್ಯವನ್ನು ಆರಂಭಿಸಲಾಯಿತು. ಇಂಜಿನಿಯರ್ ಎನ್.ಬಿ. ನಾಯಕ, ಗ್ರಾಪಂ ಸದಸ್ಯ ರಾಜೇಸಾಬ ಹತ್ತರಕಿಹಾಳ ಇದ್ದರು. 
ಜಿಲ್ಲೆ

ರಸ್ತೆ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು

ಗೊಳಸಂಗಿ: ಕಳೆದ ನಾಲ್ಕು ತಿಂಗಳಿಂದ ಆಮೆವೇಗದಲ್ಲಿ ಸಾಗುತ್ತಿದ್ದ ಜಲಜೀವನ ಮಿಷನ್ ಕಾಮಗಾರಿಯಿಂದಾಗಿ ಹದಗೆಟ್ಟಿದ್ದ ರಸ್ತೆಯ ಸ್ವಚ್ಛತೆಗೆ ಅಧಿಕಾರಿ ಬಳಗ ಕೊನೆಗೂ ದೌಡಾಯಿಸಿದೆ.

ಈ ಕುರಿತು ವಿಜಯವಾಣಿ ದಿನಪತ್ರಿಕೆ ಮಾ. 25ರಂದು ಗೊಳಸಂಗಿ ಗ್ರಾಮ ಚರಂಡಿಮಯ ಎಂಬ ಶೀರ್ಷಿಕೆಯಡಿ ಗೊಳಸಂಗಿ ಜನತೆ ಅನುಭವಿಸುತ್ತಿರುವ ಸಮಸ್ಯೆಯ ಚಿತ್ರಣವನ್ನು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಇಂಜಿನಿಯರ್ ಎನ್.ಬಿ. ನಾಯಕ ರಸ್ತೆ ಹದಗೆಟ್ಟ ಬೀದಿಗಳಲ್ಲೆಲ್ಲ ಸುತ್ತಾಡಿ ಪರಿಶೀಲನೆ ನಡೆಸಿದರು.

ಜಲಜೀವನ ಮಿಷನ್ ಯೋಜನೆಯಡಿ ಗೊಳಸಂಗಿ ಗ್ರಾಮದ ಪ್ರತಿ ಮನೆಮನೆಗೂ ನಲ್ಲಿ ನೀರು ಪೂರೈಸುವ ಕಾಮಗಾರಿ ನಡೆದಿದೆ. ಪೈಪ್‌ಲೈನ್ ಜೋಡಣೆ ಸಂದರ್ಭ ಕೆಲವು ಬೀದಿಗಳಲ್ಲಿ ತೊಂದರೆ ಆಗಿದೆ. ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲಾಗಿದ್ದು ಮುಂದಿನ ಒಂದು ವಾರದಲ್ಲಿ ಪೈಲ್‌ಲೈನ್ ಜೋಡಣೆ ಮಾಡಲಾದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ಪೂರ್ಣಗೊಳಿಸಲಾಗುವುದು.

ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ. ಜನತೆ ಸಹಕಾರ ನೀಡಬೇಕು ಎಂದು ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ ತಿಳಿಸಿದರು.