ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿ ನೀಡಿ ಹೊರ ಬಂದ ಅಂಗವಿಕಲ ವೀರಣ್ಣ ಪತ್ನಿಯೊಂದಿಗೆ. 
ಜಿಲ್ಲೆ

ನಾಲ್ಕು ವರ್ಷದಿಂದ ಅಲೆದರೂ ದಾರಿ ತೋರದ ಅಧಿಕಾರಿಗಳು

ವೃದ್ಧ ಅಂಗವಿಕಲನ ಅಳಲು | ತಹಸೀಲ್ದಾರ್​, ಜಿಲ್ಲಾಧಿಕಾರಿ, ಜನಸ್ಪಂದನದಲ್ಲಿ ಮನವಿಗೆ ದೊರಕದ ಸ್ಪಂದನೆ

ಕೋಲಾರ: ಅಂಗವಿಕಲ ವೃದ್ಧರೊಬ್ಬರು ಮನೆಗೆ ತೆರಳಲು ನಕಾಶೆ ರಸ್ತೆ ನಿರ್ಮಿಸಿಕೊಡುವಂತೆ 4 ವರ್ಷಗಳಿಂದ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಅರ್ಜಿ ಹಿಡಿದು ಅಲೆದರೂ ಇದುವರೆವಿಗೂ ಯಾರೊಬ್ಬರೂ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.


ತಾಲೂಕಿನ ಬೆಳಮಾರನಹಳ್ಳಿಯ ನಿವಾಸಿ ಅಂಗವಿಕಲ ವೀರಣ್ಣ (60) ಅವರು ವಾಸಿಸುತ್ತಿರುವ ಮನೆಗೆ ತೆರಳಲು ನಕಾಶೆ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಸಮಸ್ಯೆ ಪರಿಹರಿಸಿಕೊಡುವಂತೆ ಮಡದಿಯೊಂದಿಗೆ ಸಂಬಂಧಪಟ್ಟ ಇಲಾಖೆಗಳಿಗೆ ಅಲೆದು ಅರ್ಜಿ ನೀಡಿ, ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಜಿಲ್ಲಾಧಿಕಾರಿ, ತಹಸೀಲ್ದಾರ್​, ಜಿಲ್ಲಾಮಟ್ಟದ ಜನಸ್ಪಂದನ, ತಾಲೂಕುಮಟ್ಟದ ಎರಡು ಜನಸ್ಪಂದನ ಕಾರ್ಯಕ್ರಮದಲ್ಲಿಯೂ ಸಮಸ್ಯೆ ಪರಿಹಾರಕ್ಕೆ ಅರ್ಜಿ ನೀಡಿದ್ದರೂ ಅಂಗವಿಕಲನ ಸಮಸ್ಯೆಗೆ ಸ್ಪಂದನೆ ದೊರಕಿಲ್ಲ.


ಕೋಲಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸ್ಪಂದನದಲ್ಲೂ ಅರ್ಜಿ ನೀಡಿದ ಅಂಗವಿಕಲ ವೀರಣ್ಣ, "ನನ್ನಂತಹ ಅಂಗವಿಕಲರಿಗೆ ಇಲಾಖೆಗಳು ಸ್ಪಂದಿಸುತ್ತಿಲ್ಲ ಎಂದರೆ ಸಾಮಾನ್ಯ ಜನರಿಗೆ ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನ ಆಗುತ್ತದೆಯೇ?. ಇದುವರೆಗೂ 50ಕ್ಕೂ ಹೆಚ್ಚು ಅರ್ಜಿ ನೀಡಿದ್ದೇನೆ. ಆದರೆ ನನ್ನ ಮನೆಗೆ ನಕಾಶೆಯಲ್ಲಿರುವ ದಾರಿ ಮಾಡಿಸಲು ಸಾಧ್ಯವಾಗಿಲ್ಲ' ಎಂದು ವಿಜಯವಾಣಿ
ಜತೆ ಅಳಲು ತೋಡಿಕೊಂಡರು.

ಸ್ಥಳ ಪರಿಶೀಲಿಸಿದವರು ಮತ್ತೆ ಬರಲೇ ಇಲ್ಲ

ತಹಸೀಲ್ದಾರ್​ ಹರ್ಷವರ್ಧನ್​ ಒಂದು ಬಾರಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಹೋದವರು ಮತ್ತೆ ಬರಲೇ ಇಲ್ಲ. ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರ ಬಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಇಂತಹ ಕಾರ್ಯಕ್ರಮಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆಡಳಿತ ಎಂದು ಹೇಳುತ್ತದೆ. ಆದರೆ ಇಂತಹ ಕಾರ್ಯಕ್ರಮಗಳಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ವೀರಣ್ಣ ಬೇಸರಿಸಿದರು.

ಮನೆಗೆ ನಕಾಶೆಯಲ್ಲಿ ದಾರಿ ಇದೆ. ಆದರೆ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ರಸ್ತೆ ಮಾಡಿಸಲು 4 ವರ್ಷಗಳಿಂದ ಎಲ್ಲ ಇಲಾಖೆಗಳಿಗೂ ಅಲೆಯುತ್ತಿದ್ದೇನೆ. 50ಕ್ಕೂ ಹೆಚ್ಚು ಅರ್ಜಿ ನೀಡಿದ್ದರೂ ಅರ್ಜಿಗಳಿಗೆ ಬೆಲೆ ಇಲ್ಲದಂತಾಗಿದೆ.

ವೀರಣ್ಣ, ಅಂಗವಿಕಲ, ಬೆಳಮಾರನಹಳ್ಳಿ