ಕಾರಟಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಎಇಇ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಲಹಾ ಸಮಿತಿ ಸಭೆಯಲ್ಲಿ ಸದಸ್ಯ ಹನುಮೇಶ ವಡ್ಡರಹಟ್ಟಿ ಮಾತನಾಡಿದರು. ಎಇಇ ವೀರೇಶ, ಎಇ ನೂರ್‌ಫಾತಿಮಾ, ಜೆಇಗಳಾದ ರಾಜು, ಶಿವರಾಜ ಇತರರಿದ್ದರು. 
ಜಿಲ್ಲೆ

ನಿಗದಿತ ಕಾಲಮಿತಿಯಲ್ಲಿ ಸಭೆ ನಡೆಸದ ಅಧಿಕಾರಿಗಳು

ಕಾರಟಗಿ: ಪಟ್ಟಣದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಎಇಇ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಲಹಾ ಸಮಿತಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಕಾರಟಗಿ ನಗರ ಹಾಗೂ ಗ್ರಾಮೀಣ, ಬೂದಗುಂಪಾ ಮತ್ತು ಶ್ರೀರಾಮನಗರ ವ್ಯಾಪ್ತಿಯ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯ ಹನುಮೇಶ ವಡ್ಡರಹಟ್ಟಿ ಮಾತನಾಡಿ, ಅಧಿಕಾರಿಗಳು ವಿದ್ಯುತ್ ವ್ಯತ್ಯಯ ಸೇರಿ ಯಾವುದೇ ಕೆಲಸಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ನಿಗದಿತ ಕಾಲಮಿತಿಯಲ್ಲಿ ಸಭೆ ನಡೆಸುತ್ತಿಲ್ಲ, ಪವರ್‌ಮ್ಯಾನ್‌ಗಳು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸೌಹಾರ್ದದಿಂದ ವರ್ತಿಸುತ್ತಿಲ್ಲ, ಸಮಸ್ಯೆಗೆ ಪರಿಹಾರ ಕೇಲುವ ಜನರಿಗೆ ನಾವು ಹೇಗೆ ಉತ್ತರಿಸಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಶಂಕರಸಿಂಗ್ ಮಾತನಾಡಿ, ಮನೆಗೆ ಮೀಟರ್ ಬದಲಾಯಿಸಿದ್ದು, ಹಲವು ತಿಂಗಳಾದರೂ ಗೃಹಜ್ಯೋತಿ ಯೋಜನೆ ಅನ್ವಯಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿ ಸದಸ್ಯ ಸತ್ಯಪ್ಪ ಈಡಿಗೇರ್ ಮಾತನಾಡಿ, ವಿದ್ಯುತ್ ಪರಿವರ್ತಕಗಳ ನಿರ್ವಹಣೆಯಲ್ಲಿ ಕ್ರಮ ವಹಿಸುವಂತೆ ಸಲಹೆ ನೀಡಿದರು.

ಎಇಇ ವೀರೇಶ ಮಾತನಾಡಿ, ಪ್ರತಿಯೊಬ್ಬರೂ ಸಲಹಾ ಸಮಿತಿ ಸದಸ್ಯರೊಂದಿಗೆ ಸಮನ್ವಯ ಸಾಧಿಸಬೇಕು. ಜತೆಗೆ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿ ಕಾಲಕಾಲಕ್ಕೆ ಮಾಹಿತಿ ತಲುಪಿಸಬೇಕು ಎಂದು ಜೆಇಗಳಿಗೆ ಸೂಚಿಸಿದರು. ಎಇ ನೂರ್‌ಫಾತಿಮಾ, ಜೆಇಗಳಾದ ರಾಜು, ಶಿವರಾಜ, ಪ್ರಸಾದ, ಖಾದರ್‌ಬಾಷಾ ಇತರರಿದ್ದರು.